ADVERTISEMENT

ಬಿಜೆಪಿ ಮುಖಂಡರಿಂದ ಕೀಳು ಭಾಷೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:47 IST
Last Updated 14 ಜನವರಿ 2018, 8:47 IST

ದೇವನಹಳ್ಳಿ: ಸಂಸದೀಯ ಭಾಷೆಯ ಮೂಲಕ ಹೇಳಿಕೆ ನೀಡದ ಬಿಜೆಪಿ ಮುಖಂಡರು ಕೀಳು ಮಟ್ಟದ ಭಾಷಾ ಶೈಲಿಯಿಂದ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡು ಖೆಡ್ಡಾಕ್ಕೆ ಬೀಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಛಲವಾದಿ  ನಾರಾಯಣಸ್ವಾಮಿ ಆರೋಪಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ರಾಜ್ಯ ಸಂಚಾಲಕರಾಗಿ ನೇಮಕಗೊಂಡ ಮಾಳಿಗೇನಹಳ್ಳಿ ಆರ್‌.ಪ್ರಕಾಶ್‌ಗೆ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ದೀರ್ಘಕಾಲ ಆಡಳಿತ ನಡೆಸಿದೆ. ಇತ್ತೀಚೆಗಷ್ಟೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಒಂದು ಬಾರಿ ಅವಕಾಶ ನೀಡಿದರೆ ಹೇಗೆ ಎಂಬುದು ಮತದಾರರ ಅಭಿಪ್ರಾಯ ಒಂದೆಡೆ ಇತ್ತು. ಆದರೆ ದೇಶವನ್ನು ಪ್ರಗತಿಯ ಪಥದಲ್ಲಿ ವಿಶ್ವಮಟ್ಟಕ್ಕೆ ಕೊಂಡೊಯ್ಯುವುದಾಗಿ ಪ್ರಧಾನಿ ಹೇಳಿದ್ದರು. ಅವರು ಈಗ ದೇಶವನ್ನು ಎಲ್ಲಿ ನಿಲ್ಲಿಸಿದ್ದಾರೆ ಎಂದು ದೂರಿದರು.

ADVERTISEMENT

ಸಾಮಾನ್ಯರ ಬ್ಯಾಂಕ್‌ ಖಾತೆಗೆ ಹಣ ಬರಲಿಲ್ಲ. ಕಪ್ಪುಹಣ ಕತ್ತಲಲ್ಲಿ ಬೆಕ್ಕು ಹುಡುಕುವಂತಾಗಿದೆ, ನೋಟು ರದ್ದತಿಯಿಂದ ಸಂಕಷ್ಟ ಹೆಚ್ಚಾಯಿತು. ಜಿಡಿಪಿ ದರ ಕುಸಿಯುತ್ತಿದೆ. ಈಗ ಮೋದಿಯವರ ಒಂದೊಂದು ಪೊಳ್ಳು ಭರವಸೆ ಮತದಾರರಿಗೆ ನಿಧಾನವಾಗಿ ಅರ್ಥವಾಗುತ್ತಿದೆ. 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ನಿರಾಸೆ ಕಾದಿದೆ ಎಂದರು.

ಅಭಿನಂದೆ ಸ್ವೀಕರಿಸಿ ಮಾತನಾಡಿದ ಆರ್‌.ಪ್ರಕಾಶ್‌ ಮಾತನಾಡಿದರು. ಕೆಪಿಸಿಸಿ ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್‌, ಕೆಪಿಸಿಸಿ ಹಿಂದುಳಿದ ವರ್ಗ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ರವಿಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ಕಾಂಗ್ರೆಸ್‌ ತಾಲ್ಲೂಕು ಸಂಚಾಲಕ ನರಸಪ್ಪ, ಭೂನ್ಯಾಯ ಮಂಡಳಿ ಸದಸ್ಯರಾದ ಮುನಿರಾಜು, ಸೋಮಣ್ಣ, ವಿಜಯಪುರ ಹೋಬಳಿ ಕಾಂಗ್ರೆಸ್‌ ಘಟಕ ಉಪಾಧ್ಯಕ್ಷ ಡೇವಿಡ್‌ ನಾರಾಯಣಸ್ವಾಮಿ, ಕಾಂಗ್ರೆಸ್‌ ಎಸ್ಸಿ ಘಟಕ ತಾಲ್ಲೂಕು ಅಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಆನಂದ್‌ ಕುಮಾರ್‌, ಮುಖಂಡರಾದ ಚಿನ್ನಪ್ಪ, ಜಾಲಿಗೆ ಮುನಿರಾಜು, ಎಚ್‌.ಕೆ.ವೆಂಕಟೇಶಪ್ಪ, ಪಟಾಲಪ್ಪ ಇದ್ದರು.

ರಾಜ್ಯದಲ್ಲಿ ಚುನಾವಣಾ ವ್ಯವಹಾರ ನಡೆಯಲ್ಲ

ಕೆಪಿಸಿಸಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಮಿತ್‌ ಷಾ ಅವರು ಚುನಾವಣಾ ಕಣವನ್ನು ರಾಜಕೀಯ ವ್ಯವಹಾರ ಮಾಡಲು ಎಂದು ಮುಖಂಡರಿಗೆ ತಾಕೀತು ಮಾಡಿದ್ದಾರೆ. ಇಲ್ಲಿ ಚುನಾವಣಾ ವ್ಯವಹಾರ ನಡೆಯುವುದಿಲ್ಲ. ಸೋಲಿನ ಭಯ, ಮುಖಂಡರ ಆಂತರಿಕ ಕಚ್ಚಾಟ ಸರಿಪಡಿಸಲು ಬರುತ್ತಿದ್ದಾರೆಯೇ ಹೊರತು ಯಾವುದೇ ರಣವೀಳ್ಯೆ ನೀಡಲು ಅಲ್ಲ. ಅವರಿಗೆ ಅಧಿಕಾರ ಎಂಬುದು ಇನ್ನು ಮುಂದೆ ಕನಸು ಎಂದು ಲೇವಡಿ ಮಾಡಿದರು.

ಆರು ದಶಕಗಳ ಕಾಲ ದೇಶಕ್ಕೆ ಕಾಂಗ್ರೆಸ್‌ ಪ್ರಗತಿಗೆ ಭದ್ರ ಬುನಾದಿ ಹಾಕಿದೆ. ಬಿಜೆಪಿ ಮುಖಂಡರಿಗೆ ಸೌಜನ್ಯ ಇಲ್ಲ. ಕಾಂಗ್ರೆಸ್‌ ಈ ಹಿಂದೆ ಏನು ಮಾಡಿದೆ ಎಂಬುದನ್ನು ಇತಿಹಾಸದ ಮೂಲಕ ಅವರು ಅರಿತರೆ ಒಳ್ಳೆಯರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.