ADVERTISEMENT

ಹೊಸ ಪ್ರಯೋಗದ ಅನ್ವೇಷಕ

ನಾರಾಯಣರೆಡ್ಡಿ ಸ್ಮರಣಾರ್ಥ ಕೃಷಿ ವಿಚಾರ ಮಂಥನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 3:22 IST
Last Updated 15 ಜನವರಿ 2021, 3:22 IST
ಸಾವಯವ ಕೃಷಿಕ ನಾರಾಯಣರೆಡ್ಡಿ ಅವರ ತೋಟದಲ್ಲಿ ಕೃಷಿ ವಿಚಾರ ಮಂಥನದಲ್ಲಿ ಭಾಗವಹಿಸಿದ್ದ ರೈತರು
ಸಾವಯವ ಕೃಷಿಕ ನಾರಾಯಣರೆಡ್ಡಿ ಅವರ ತೋಟದಲ್ಲಿ ಕೃಷಿ ವಿಚಾರ ಮಂಥನದಲ್ಲಿ ಭಾಗವಹಿಸಿದ್ದ ರೈತರು   

ದೊಡ್ಡಬಳ್ಳಾಪುರ: ಹಸಿರು ಕ್ರಾಂತಿ ಯಿಂದ ದೇಶದ ಆಹಾರ ಸ್ವಾವಲಂಬನೆ ಎನ್ನುವ ನಂಬಿಕೆ ಸುಳ್ಳು ಎಂದು ಸಾಬೀತು ಮಾಡಿದವರು ಸಾವಯವ ಕೃಷಿ ತಜ್ಞ ಡಾ.ಎಲ್‌.ನಾರಾಯಣರೆಡ್ಡಿ ಅವರು ಎಂದು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ತಾಲ್ಲೂಕಿನ ಮರಳೇನಹಳ್ಳಿಯಲ್ಲಿನ ಕೃಷಿ ಋಷಿ ನಾಡೋಜ ಡಾ.ಎಲ್.ನಾರಾಯಣರೆಡ್ಡಿ ಅವರ ಎರಡನೇ ಪುಣ್ಯ ಸ್ಮರಣ ಅಂಗವಾಗಿ ತೋಟದಲ್ಲಿ ನಡೆದ ಕೃಷಿ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಗೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಆದರೆ, ಹೊಸ ಪ್ರಯೋಗ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಂಡುಕೊಂಡವರು ನಾರಾಯಣರೆಡ್ಡಿ. ಕೃಷಿಯಲ್ಲಿ ಈಗ ಸ್ಥಳೀಯವಾಗಿಯೂ ಸಾಕಷ್ಟು ಜನಪರ್ಯಾಯ ನಡೆಸುತ್ತಿದ್ದಾರೆ. ಇಂತಹವರಿಗೆ ಸ್ಫೂರ್ತಿಯಾಗಿರುವುದೇ ನಾರಾಯಣರೆಡ್ಡಿ ಅವರ ಪ್ರಯೋಗ. ನಮ್ಮದು ಅತೃಪ್ತಿಯ ಅರ್ಥಶಾಸ್ತ್ರವಾಗಿದೆ. ಕೃಷಿ ನಮಗೆ ನೆಮ್ಮದಿ ಹಾಗೂ ಅನ್ನ ನೀಡುತ್ತದೆ. ಇದಕ್ಕಿಂತಲೂ ಮನುಷ್ಯನಿಗೆ ಮತ್ತೇನು ಬೇಕಿದೆ ಎನ್ನುವುದು ನಾರಾಯಣರೆಡ್ಡಿ ಅವರ ಪ್ರತಿಪಾದನೆಯಾಗಿತ್ತು. ಅವರ ಹೊಸ ಕೃಷಿ ವಿಚಾರ ಮೆಚ್ಚಿದ ನಬಾರ್ಡ್‌ನ ಅಧಿಕಾರಿಯೊಬ್ಬರು ಅವರ ಎಲ್ಲ ಕೃಷಿ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಈ ಪುಸ್ತಕ ಕೃಷಿಯಲ್ಲಿ ಐತಿಹಾಸಿಕ ದಾಖಲಾ
ತಿಯಾಗಿ ಉಳಿಯಲಿದೆ ಎಂದರು.

ADVERTISEMENT

ಇತಿಹಾಸ ತಜ್ಞ ಡಾ.ಎಸ್‌.ವೆಂಕಟೇಶ್‌ ಮಾತನಾಡಿ, ಸುಮಾರು ಮೂರು ಶತಮಾನಗಳ ಹಿಂದೆಯೇ ತಾಲ್ಲೂಕಿನ ಹುಲುಕುಡಿ ನಾಡಪ್ರಭುಗಳು ಮಕ್ಕಳರಾಯನ ತೋಪು ಬೆಳೆಸುವ ಮೂಲಕ ಸುಮಾರು 300 ಜಾತಿಯ ವೈವಿಧ್ಯಮಯ ಸಸಿಗಳಿಂದ ಕೂಡಿದ್ದ ತೋಟ ಬೆಳೆಸಿದ್ದರ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖ ದೊರೆತಿವೆ. 18ನೇ ಶತಮಾನದ ರಾಘವೇಂದ್ರಪ್ಪ ಅವರು ಬರೆದಿರುವ ಪುಸ್ತಕದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿದ್ದ ಜೀವ ವೈಧ್ಯದ ತೋಟಗಳ ಬಗ್ಗೆ ಉಲ್ಲೇಖವನ್ನು ಮಾಡಿದ್ದಾರೆ ಎಂದರು.

ಯುವ ಸಂಚಲನ ತಂಡದ ಚಿದಾನಂದಮೂರ್ತಿ ಆರಾಧ್ಯ ಮಾತ ನಾಡಿ, ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯೊಂದರಲ್ಲೇ 283 ಜಾತಿಯ ಜೀವ ವೈಧ್ಯತೆ ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ. ನಮ್ಮಲ್ಲಿನ ಯಾವುದೇ ಇಲಾಖೆಯಲ್ಲೂ ಸ್ಥಳೀಯ ಜೀವವೈಧ್ಯದ ದಾಖಲಾತಿಯೇ ಇಲ್ಲದಾಗಿದೆ ಎಂದು ಅವರು ದೂರಿದರು.

ಸಮಾರಂಭದಲ್ಲಿ ಕೃಷಿ ಚಿಂತಕ ಶ್ರೀಕಾಂತ್ ಶಿನಾಯ್, ಸೊಲ್ಲಾಪುರದ ಸಿದ್ದಗಿರಿ ಕನ್ನೇರಿಮಠದ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿ ಹಾಗೂ ನಾರಾಯಣ ರೆಡ್ಡಿ ಅವರ ಕುಟುಂಬದವರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.