ADVERTISEMENT

ವೀರಬ್ರಹ್ಮೇಂದ್ರ ನುಡಿ ಪಾಲಿಸದ ಸಮಾಜ: ಶಿವಸುಜ್ಞಾನತೀರ್ಥ ಸ್ವಾಮೀಜಿ

17ನೇ ಶತಮಾನದಲ್ಲಿ ಜೀವಿಸಿದ್ದ ಕಾಲಜ್ಞಾನಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:18 IST
Last Updated 23 ಫೆಬ್ರುವರಿ 2026, 2:18 IST
ದೊಡ್ಡಕೋಳಲಿಗ ಗ್ರಾಮದಲ್ಲಿ ನೂತನ ಮಹಾಗಣಪತಿ, ವೀರಬ್ರಹ್ಮೇಂದ್ರಸ್ವಾಮಿ, ಕಾಳಿಕಾಂಭ ಕಮಟೇಶ್ವರ ದೇವತಾ ಮೂರ್ತಿಗಳ ಪ್ರತಿಷ್ಠಾ‍ಪನೆ ನಡೆಯಿತು 
ದೊಡ್ಡಕೋಳಲಿಗ ಗ್ರಾಮದಲ್ಲಿ ನೂತನ ಮಹಾಗಣಪತಿ, ವೀರಬ್ರಹ್ಮೇಂದ್ರಸ್ವಾಮಿ, ಕಾಳಿಕಾಂಭ ಕಮಟೇಶ್ವರ ದೇವತಾ ಮೂರ್ತಿಗಳ ಪ್ರತಿಷ್ಠಾ‍ಪನೆ ನಡೆಯಿತು    

ದೊಡ್ಡಕೋಳಲಿಗ(ಹೊಸಕೋಟೆ): ಕಾಲಜ್ಞಾನಿ ಪೋತಲೂರು ವೀರಬ್ರಹ್ಮೇಂದ್ರ ನುಡಿದಿರುವ ಜಗತ್ತಿನ ಭವಿಷ್ಯ ಮತ್ತು 17ನೇ ಶತಮಾನದಲ್ಲಿ ನವಾಬರ ದರ್ಬಾರ್‌ನಲ್ಲಿ ಅವರು ಮೂಡಿಸಿದ ಧಾರ್ಮಿಕ ಸಾಮರಸ್ಯ ಇಂದು ಮರೆಯುತ್ತಾ ಕೋಮು ಸೌಹಾರ್ದ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಶ್ವಕರ್ಮ ಸುಜ್ಞಾನಪ್ರಭು ಪೀಠದ ಅರೇಮಾದನಹಳ್ಳಿ ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೂಲಿಬೆಲೆ ಹೋಬಳಿ ದೊಡ್ಡಕೋಳಲಿಗ ಗ್ರಾಮದ ಬಸವೇಶ್ವರ ದೇವಸ್ಥಾನ ಅಕ್ಕಯ್ಯಮ್ಮ ಗುಡ್ಡದ ತಪ್ಪಲಿನಲ್ಲಿ ವೀರಬ್ರಹ್ಮೇಂದ್ರಸ್ವಾಮಿ ಸೇವಾ ಸಮಿತಿ ಹಾಗೂ 350ಕ್ಕೂ ಹೆಚ್ಚು ದಾನಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ನಿರ್ಮಾಣ ಮಾಡಲಾದ ಮಹಾಗಣಪತಿ, ವೀರಬ್ರಹ್ಮೇಂದ್ರ, ಕಾಳಿಕಾಂಭ ಕಮಟೇಶ್ವರ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದರು.

‘ಇಂದು ಮನುಷ್ಯ ದುಡಿಮೆ ಇಲ್ಲದ ಸಂಪತ್ತು, ತ್ಯಾಗ ಇಲ್ಲದ ಪೂಜೆ, ತತ್ವರಹಿತ ರಾಜಕೀಯ, ಕರ್ಮ ಇಲ್ಲದ ಯೋಗ ಮತ್ತು ಸಮಾನತೆ ಇಲ್ಲದ ಬದುಕನ್ನು ಅರ್ಥ ಮಾಡಿಕೊಂಡಿಲ್ಲ. ಇಂತಹ ಸ್ಥಿತಿಯಲ್ಲಿ ಸಮಾಜ ಜಡವಾಗುತ್ತದೆ. ಪ್ರತಿಯೊಬ್ಬರೂ ಒಂದಾದರೆ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ADVERTISEMENT

ವೀರಬ್ರಹ್ಮೇಂದ್ರ ಮಠದ ಕಂದಿಮಲ್ಲಯಪಲ್ಲಿ ಕಡಪ ಜಿಲ್ಲೆಯ ವೀರಭದ್ರ ಸ್ವಾಮೀಜಿ ಮಾತನಾಡಿ,‘ಮನುಷ್ಯನ ಕ್ಷಣಿಕ ಆಸೆಗಳು ಮತ್ತು ಆಕರ್ಷಣೆಗಳಿಗೆ ಬಲಿಯಾಗಿ ತನ್ನ ತನವನ್ನು ಕಳೆದುಕೊಳ್ಳುತ್ತಾ ಅಮೂಲ್ಯವಾದ ಮನುಷ್ಯ ಜನ್ಮಕ್ಕೆ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾನೆ. 17ನೇ ಶತಮಾನದಲ್ಲೇ ಕಾಲಜ್ಞಾನಿ ಇದನ್ನು ಜಗತ್ತಿಗೆ ಸಾರಿದ್ದರು. ಆದರೆ, ಇಂದಿಗೂ ಮನುಷ್ಯ ಅವುಗಳನ್ನು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲೇ ಬದುಕುತ್ತಿದ್ದಾನೆ’ ಎಂದು ಎಚ್ಚರಿಸಿದರು. 

ಪ್ರತಿಷ್ಠಾಪನೆ ಅಂಗವಾಗಿ ವೇದಪಾರಾಯಣ, ಗಂಗೆ ಪೂಜೆ, ಗೋಪೂಜೆ, ಗಣಪತಿ ಪೂಜೆ, ಸಪ್ತಮಾತೃಕಾ ಪೂಜೆ, ಅಗ್ನಿ ಪ್ರತಿಷ್ಠೆ, ಭಾಜನೆ ಮತ್ತು ಬೆಳ್ಳಿ ರಥದಲ್ಲಿ ವಿಗ್ರಹಗಳ ಮೆರವಣಿಗೆಯಂತಹ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುತ್ತನಹಳ್ಳಿ ತಂಡದಿಂದ ಕೋಲಾಟ ಮತ್ತು ವಿವಿಧ ತಂಡಗಳಿಂದ ಭಕ್ತಿ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಯಿತು.

ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಹಿರಿಯ ಮುಖಂಡ ಬಿ.ಎನ್.ಗೋಪಲಗೌಡ, ಮನಿ ಮಾರನ್, ವಾಣಿಜ್ಯ ತೆರಿಗೆ ನಿವೃತ್ತ ಜಂಟಿ ಆಯುಕ್ ಮಾಳಿಗಾಚಾರ್, ಪದ್ಮಶ್ರೀ ಪುರಸ್ಕೃತ ಸಿ.ಆರ್ ಚಂದ್ರಶೇಖರ್, ಗ್ರಾಮದ ಹಿರಿಯ ಮುಖಂಡ ತಮ್ಮೆಗೌಡ, ಗ್ರಾ.ಪಂ.ಸದಸ್ಯರಾದ ಶಿವಕುಮಾರ್, ವಿಶ್ವಕರ್ಮ ಸಮಾಜದ ನಿರ್ದೇಶಕರಾದ ಸತ್ಯವತಿ, ವೀರಬ್ರಹ್ಮೇಂದ್ರ ಸೇವಾ ಸಮಿತಿ ಗೌರವಾಧ್ಯಕ್ಷ ರಾಜಣ್ಣಚಾರ್, ಸುಬ್ರಮಣಿಚಾರ್, ಅಧ್ಯಕ್ಷ ಎಚ್‌.ಎಸ್ ರಾಮಾಚಾರ್, ಉಪಾಧ್ಯಕ್ಷ ರವೀಂದ್ರಚಾರ್, ಮಂಜುನಾಥ್, ಸಂಘದ ಪಧಾಧಿಕಾರಿಗಳು, ಗ್ರಾಮಸ್ಥರು, ಸುತ್ತಲಿನ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.