ADVERTISEMENT

ಆನೇಕಲ್–ಹೊಸೂರು ರಸ್ತೆ: ಅಪಘಾತ ಹೆಚ್ಚಳ

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸವಾರರ ಪರದಾಟ l ಅಪಾಯ ಆಹ್ವಾನಿಸುತ್ತಿರುವ ರಸ್ತೆ ಉಬ್ಬು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:16 IST
Last Updated 19 ನವೆಂಬರ್ 2022, 6:16 IST
ಆನೇಕಲ್-ಹೊಸೂರು ರಸ್ತೆಯು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ
ಆನೇಕಲ್-ಹೊಸೂರು ರಸ್ತೆಯು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ   

ಆನೇಕಲ್: ಆನೇಕಲ್‌-ಹೊಸೂರು ರಸ್ತೆಯಲ್ಲಿ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಅಪಘಾತಗಳ ಹಾದಿಯಾಗಿದೆ. ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಜನರು ಪ್ರಾಣ ಕೈಯ್ಯಲಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆನೇಕಲ್‌-ಹೊಸೂರು ರಸ್ತೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಯ ಗಂಗಮ್ಮನ ಗುಡಿ ದೇವಾಲಯದ ಸಮೀಪ ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಿಸಲಾಗಿದೆ. ಈ ಉಬ್ಬು ಸವಾರರಿಗೆ ಕಾಣ ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ ಎರಡು ದಿನಗಳಿಂದ ನಾಲ್ಕೈದು ಅಪಘಾತಗಳು ಇಲ್ಲಿಯೇ ಸಂಭವಿಸುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರು ಹರಿದು ಹೋಗಲು ರಾಜಕಾಲುವೆ ಪೈಪ್‌ನ್ನು ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ರಸ್ತೆಯ ಉಬ್ಬು ನಿರ್ಮಾಣವಾಗಿದೆ. ಹಾಗಾಗಿ ಈ ಉಬ್ಬು ರಸ್ತೆಯ ಹಂಪ್‌ ರೀತಿಯಲ್ಲಿಯೂ ಇಲ್ಲ, ಇನ್ನೂ ತೆಳುವಾದ ಉಬ್ಬಾಗಿದ್ದು ದ್ವಿಚಕ್ರ ವಾಹನ ಸವಾರರು ಅರಿವಿಲ್ಲದೇ ಇಲ್ಲಿ ಬೀಳುತ್ತಿದ್ದಾರೆ. ಹಾಗಾಗಿ ಕೂಡಲೇ ರಸ್ತೆ ಸರಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ADVERTISEMENT

ರಸ್ತೆ ಉಬ್ಬಿನಿಂದಾಗಿ ಸಂಭವಿಸಿದ ಅಪಘಾತದಿಂದ ಗುಡ್ಡನಹಳ್ಳಿಯ ನಿವಾಸಿ ರಮೇಶ್‌ ಎಂಬುವವರು ಕೈ ಮುರಿದಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಮೇಶ್‌ ಮಾತನಾಡಿ ಹಳ್ಳ ಕೊಳ್ಳಗಳ ರಸ್ತೆಯಲ್ಲೂ ಜೋಪಾನದಿಂದ ಸಂಚರಿಸುತ್ತೇವೆ. ಆದರೆ ಹೊಸ ರಸ್ತೆಯಲ್ಲಿ ಉಬ್ಬಿನ ಅರಿವಿಲ್ಲದೇ ದ್ವಿಚಕ್ರ ವಾಹನ ಸವಾರರು ಎರಡುಮೂರು ದಿನಗಳಿಂದ ಬೀಳುತ್ತಿದ್ದಾರೆ. ರಸ್ತೆ ಡಾಂಬರೀಕರಣವಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬ ಸಂತಸದಲ್ಲಿದ್ದ ಜನರಿಗೆ ರಸ್ತೆ ಉಬ್ಬು ನಿತ್ಯ ಕಾಡುತ್ತಿದೆ ಎಂದರು.

ಆನೇಕಲ್‌-ಹೊಸೂರು ರಸ್ತೆಯಲ್ಲಿ ಹಲವಾರು ಶಾಲಾ ಕಾಲೇಜುಗಳಿವೆ. ಗುಡ್ಡನಹಳ್ಳಿ, ಸಮಂದೂರು, ಗೆರಟಿಗನಬೆಲೆ, ಮಾರನಾಯಕನಹಳ್ಳಿ, ಹೊಂಪಲಘಟಟ ಸೇರಿದಂತೆ ಹಲವಾರು ಗ್ರಾಮಗಳಿಗೆ ಮತ್ತು ತಮಿಳುನಾಡಿನ ಹೊಸೂರಿಗೆ ಆನೇಕಲ್‌ನಿಂದ ಇದೇ ಮಾರ್ಗದಲ್ಲಿ ತೆರಳಬೇಕು. ಹೆಚ್ಚಿನ ವಾಹನ ಸಂಚಾರವಿರುವ ಈ ರಸ್ತೆಯು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.

ಈ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯ ನಡೆದಿದ್ದು ಕಳೆದ ಒಂದು ವಾರದಿಂದ ಡಾಂಬರಿಕರಣ ಕಾರ್ಯ ನಡೆದಿದೆ. ಹೊಸ ರಸ್ತೆಯಲ್ಲಿ ಯಾವುದೇ ಹಂಪ್‌ಗಳಿಲ್ಲದಿರುವುದರಿಂದ ವೇಗವಾಗಿ ಬರುವ ವಾಹನಗಳು ರಸ್ತೆ ಉಬ್ಬಿನ ಬಳಿ ಆಯ ತಪ್ಪಿ ಅಪಘಾತಗಳಾಗುತ್ತಿವೆ. ಹಾಗಾಗಿ ರಸ್ತೆ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.