ADVERTISEMENT

ರಸ್ತೆಬದಿ ಅಂಗಡಿಗಳ ತೆರವು ಕಾರ್ಯಾಚರಣೆಗೆ ಕ್ರಮ

ಅಂಗಡಿ ತೆರವಿಗೆ ಕಾಲಾವಕಾಶ, ವಾಹನ ದಟ್ಟಣೆ ನಿವಾರಣೆಗೆ ಸೂಕ್ತ ‍ಪರಿಹಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 12:33 IST
Last Updated 11 ಡಿಸೆಂಬರ್ 2019, 12:33 IST
ವಿಜಯಪುರ ಪೊಲೀಸ್ ಠಾಣೆಯಲ್ಲಿ ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಗಳ ಕುರಿತು ಸಬ್‌ ಇನ್‌ಸ್ಪೆಕ್ಟರ್ ಡಿ.ಮಂಜುನಾಥ್ ಅವರಿಂದ ಡಿವೈಎಸ್‌ಪಿ ಟಿ.ರಂಗಪ್ಪ ಮಾಹಿತಿ ಪಡೆದರು. ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಇದ್ದರು
ವಿಜಯಪುರ ಪೊಲೀಸ್ ಠಾಣೆಯಲ್ಲಿ ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಗಳ ಕುರಿತು ಸಬ್‌ ಇನ್‌ಸ್ಪೆಕ್ಟರ್ ಡಿ.ಮಂಜುನಾಥ್ ಅವರಿಂದ ಡಿವೈಎಸ್‌ಪಿ ಟಿ.ರಂಗಪ್ಪ ಮಾಹಿತಿ ಪಡೆದರು. ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಇದ್ದರು   

ವಿಜಯಪುರ: ‘ಚಿಕ್ಕಬಳ್ಳಾಪುರ ಮತ್ತು ಕೋಲಾರ ರಸ್ತೆಯ ಇಕ್ಕೆಲಗಳಲ್ಲಿರುವ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಗೆ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಟ್ಟಿಗೆ ಶೀಘ್ರವೇ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಟಿ.ರಂಗಪ್ಪ ಹೇಳಿದರು.

ಇಲ್ಲಿ ಮಂಗಳವಾರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅವರು ಟ್ರಾಫಿಕ್ ಸಮಸ್ಯೆಗಳ ಕುರಿತು ಜನರಿಂದ ಮಾಹಿತಿ ಪಡೆದು ಮಾತನಾಡಿದರು.

‘ರಸ್ತೆ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ತೆರೆದು, ವಿದ್ಯುತ್ ಸಂಪರ್ಕ ಪಡೆದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಂಗಡಿಯವರಿಗೆ ಸಮಯಾವಕಾಶ ನೀಡಿ, ನಂತರ ಗಡುವಿನೊಳಗೆ ಅಂಗಡಿ ತೆರವು ಮಾಡದಿದ್ದರೆ ಕಾರ್ಯಾಚರಣೆ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಪಟ್ಟಣದಲ್ಲಿ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಲ್ಲಿ ವಾಹನ ದಟ್ಟಣೆ ಇದೆಯೋ ಇದೆಯೋ ಅಂತಹ ಕಡೆಗಳಲ್ಲಿ ದಟ್ಟಣೆ ನಿವಾರಣೆ ಮಾಡಲು ಪರಿಹಾರ ಕುರಿತು ಚರ್ಚೆ ಮಾಡಲಾಗವುದು. ಇದಕ್ಕೆ ಜನರ ಸಹಕಾರವೂ ಅಗತ್ಯ’ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ‘ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯರ ಸಹಕಾರ ಮುಖ್ಯ. ಶಾಲಾ, ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಕಾನೂನುಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲಾ, ಕಾಲೇಜು ಮುಗಿದ ನಂತರ ಬಹಳಷ್ಟು ಮಂದಿ ವೀಲಿಂಗ್ ಮಾಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಪ್ರಕರಣಗಳು ಕೇಳಿ ಬಂದಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಸಬ್‌ ಇನ್‌ಸ್ಪೆಕ್ಟರ್ ಡಿ.ಮಂಜುನಾಥ್ ಮಾತನಾಡಿ, ‘ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಹಲವು ಜಾಗೃತಿ ಕಾರ್ಯಕ್ರಮಗಳನ್ನೂ ಮಾಡಿದ್ದೇವೆ. ಚಾಲನಾ ಪರವಾನಗಿ ಇಲ್ಲದವರಿಗೆ ಸಮಯ ನೀಡಿದ್ದು, ಸಂಚಾರ ನಿಯಮ ಮೀರಿದ ಕೆಲವರ ಮೇಲೆ ಪ್ರಕರಣಗಳನ್ನೂ ದಾಖಲಿಸಲಾಗಿದೆ’‍ ಎಂದರು.

ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಟಿ.ಮುನಿರಾಜು, ಕಾನ್‌ಸ್ಟೆಬಲ್‌ ಕೃಷ್ಣಾನಾಯಕ್, ವೆಂಕಟೇಶ್, ನಾಗೇಶ್, ಲಕ್ಷ್ಮೀಪತಿ, ಮಂಜುನಾಥ್, ಗೋಪಾಲಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.