ADVERTISEMENT

ನುಗ್ಗೆ ಸೊಪ್ಪು ಸೇವಿಸಲು ಸಲಹೆ

ಗಾರ್ಮೆಂಟ್ಸ್‌ ಮಹಿಳೆಯರಲ್ಲಿ ಆರೋಗ್ಯ ಏರುಪೇರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 12:40 IST
Last Updated 7 ಸೆಪ್ಟೆಂಬರ್ 2019, 12:40 IST
ರಾಜ್ಯ ಎಪಿಎಂಸಿ ನಿರ್ದೇಶಕ ಸಿ.ಎಸ್‌.ಕರೀಗೌಡ ಮಾತನಾಡಿದರು
ರಾಜ್ಯ ಎಪಿಎಂಸಿ ನಿರ್ದೇಶಕ ಸಿ.ಎಸ್‌.ಕರೀಗೌಡ ಮಾತನಾಡಿದರು   

ದೊಡ್ಡಬಳ್ಳಾಪುರ: ಗಾರ್ಮೆಂಟ್ಸ್‌ಗಳಿಗೆ ಕೆಲಸಕ್ಕೆ ಬರುವ ಶೇ20ರಷ್ಟು ಮಹಿಳೆಯರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದು ಹಾಗೂ ಕಬ್ಬಿಣದ ಅಂಶ ಕಡಿಮೆಯಾಗಿರುವುದು ಕಂಡು ಬಂದಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ರಾಜ್ಯ ಎಪಿಎಂಸಿ ನಿರ್ದೇಶಕ ಸಿ.ಎಸ್‌.ಕರೀಗೌಡ ಕಳವಳ ವ್ಯಕ್ತಪಡಿಸಿದರು.

ಅವರು ನಗರದ ಸೋಮೇಶ್ವರ ಬಡಾವಣೆಯಲ್ಲಿ ಸಿದ್ದಿಪ್ರಿಯ ವಿನಾಯಕ ಗೆಳೆಯರ ಬಳಗದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿನ ಎಲ್ಲಾ ಗಾರ್ಮೆಂಟ್ಸ್‌ಗಳಿಗೆ ಬರುವ ಮಹಿಳೆಯರ ಆರೋಗ್ಯ ತಪಾಸಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ನಡೆಸಿದ ರಕ್ತ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಯಾವುದೇ ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಮಾತ್ರ ಆ ಕುಟುಂಬ ಅರ್ಥಿಕವಾಗಿ ಸೇರಿದಂತೆ ಎಲ್ಲಾ ರೀತಿಯಿಂದಲೂ ಸದೃಢವಾಗಿರಲು ಸಾಧ್ಯ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿದ್ದಂತೆ ಗಾರ್ಮೆಂಟ್ಸ್‌ಗಳಲ್ಲಿ ನಿಂತು ಕೆಲಸ ಮಾಡಲು ಸುಸ್ತಾಗುತ್ತದೆ. ಇದರಿಂದ ಕೆಲಸವನ್ನೇ ಕಳೆದುಕೊಳ್ಳುವ ಅಪಾಯ ಎಂದರು.

ADVERTISEMENT

ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದ್ದರೂ ಹಲವು ರೀತಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಕನಿಷ್ಠ ಪ್ರತಿಯೊಬ್ಬರು ಮನೆ ಆವರಣದಲ್ಲಿ ಒಂದು ನುಗ್ಗೆ ಮರ ಬೆಳೆಸಿ ಸೊಪ್ಪು, ಕಾಯಿ, ಹೂವು ತರಕಾರಿಯಾಗಿ ಬಳಸಿದರೆ ಆರೋಗ್ಯ ಸುಧಾರಿಸುತ್ತದೆ. ಯಾವುದೇ ಕುಟುಂಬದಲ್ಲಿ ಬೆಳಿಗ್ಗೆ ಬೇಗನೆ ಎಳುವುದು, ರಾತ್ರಿ ಎಲ್ಲರಿಗಿಂತಲೂ ಕೊನೆಯಲ್ಲಿ ಮಲಗುವುದು ಮಹಿಳೆ. ಇಂತಹವರ ಆರೋಗ್ಯವೇ ಕೆಟ್ಟರೆ ಮಕ್ಕಳನ್ನು ಪಡೆಯಲು, ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಗಣೇಶ ಹಬ್ಬದ ಆಚರಣೆ ನೆಪದಲ್ಲಿಯಾದರೂ ಇಡೀ ಬಡಾವಣೆ ಜನ ಒಂದೆಡೆ ಸೇರಲು ಅವಕಾಶವಾಗಲಿದೆ. ಇಂತಹ ಸಂದರ್ಭವನ್ನೇ ಬಳಸಿಕೊಂಡು ಮಹಿಳೆಯರಿಗೆ ಹಾಗೂ ಯುವ ಸಮುದಾಯದ ಬದುಕಿಗೆ ಅಗತ್ಯ ಇರುವ ಚರ್ಚೆ ನಡೆಯುವ ವೇದಿಕೆಯಾಗಿ ಬಳಕೆಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖಂಡರಾದ ವಡ್ಡರಹಳ್ಳಿರವಿ, ಪದ್ಮನಾಭ್‌, ಶಿವಕುಮಾರ್‌, ಸೋಮಣ್ಣ, ಕೆ.ಎಸ್‌.ರವಿಕುಮಾರ್‌, ಐಟಿ ಉದ್ಯೋಗಿ ಜಿ.ರಾಜಶೇಖರ್‌, ಎಂಜಿನಿಯರ್‌ ಮುನಿರಾಜು, ನಿವೃತ್ತ ಶಿಕ್ಷಕ ಕೆ.ಮಹಾಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.