ADVERTISEMENT

ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಸಲಹೆ

ವರಮಹಾಲಕ್ಷ್ಮಿ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:43 IST
Last Updated 14 ಆಗಸ್ಟ್ 2019, 14:43 IST
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಲ್ಲೂರು ವಲಯದ ವರಮಹಾಲಕ್ಷ್ಮಿ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಲೆಕ್ಕಪುಸ್ತಕಗಳು ಹಸ್ತಾಂತರಿಸಲಾಯಿತು
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಲ್ಲೂರು ವಲಯದ ವರಮಹಾಲಕ್ಷ್ಮಿ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಲೆಕ್ಕಪುಸ್ತಕಗಳು ಹಸ್ತಾಂತರಿಸಲಾಯಿತು   

ವಿಜಯಪುರ: ‘ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಅಲ್ಲದೆ ಮಹಿಳಾ ಸಂಘಗಳಲ್ಲಿ ಮಾಡುವ ವ್ಯವಹಾರಗಳು ಪಾರದರ್ಶಕವಾಗಿರಬೇಕು’ ಎಂದು ಎ.ಪಿ.ಎಂ.ಸಿ.ಸದಸ್ಯೆ ಅಮರಾವತಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಲ್ಲೂರು ವಲಯದ ವರಮಹಾಲಕ್ಷ್ಮಿ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೆಚ್ಚು ಸಹಕಾರಿಯಾಗಿದೆ. ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಸಮಾಜದ ಏಳಿಗೆ, ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆಗೂ ಹೆಚ್ಚು ಗಮನ ಕೊಡಬೇಕಾಗಿರುವ ಅನಿವಾರ್ಯತೆ ಇದೆ’ ಎಂದು ಹೇಳಿದರು.

ADVERTISEMENT

‘ಸಂಘದಲ್ಲಿ ಉಳಿತಾಯ ಮಾಡುವುದರ ಜತೆಗೆ, ಸಂಘದಿಂದ ಪಡೆಯುವಂತಹ ಸಾಲ ಸೌಲಭ್ಯಗಳನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ನಿಗದಿತ ಸಮಯದಲ್ಲಿ ಸಾಲ ಮರುಫಾವತಿ ಮಾಡಿ ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಗುಡಿ ಕೈಗಾರಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆಯಂತಹ ಉಪಕಸುಬು ಮಾಡಿಕೊಂಡರೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುತ್ತದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ‘ತಾಲ್ಲೂಕಿನಲ್ಲಿ 7 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಲಾಗುತ್ತಿದೆ. 2,700 ಸಂಘಗಳುಸ್ಥಾಪನೆಯಾಗಿವೆ. ಈಗ ಪ್ರಗತಿ ಬಂಧು ಸಂಘ 60 ವರ್ಷದ ಮೇಲ್ಪಟ್ಟಿರುವವೃದ್ಧರಿಗೆ ಬ್ಯಾಂಕಿನಲ್ಲಿ ಸೌಲಭ್ಯ ಸಿಗದೆ ಇದ್ದರೆ ನಮ್ಮ ಯೋಜನೆಯ ಮುಖಾಂತರ ಅವರಿಗೂ ಸಂಘದ ರೂಪದಲ್ಲಿ ಸಹಾಯ ಮಾಡಲಾಗುತ್ತದೆ’ ಎಂದು ಹೇಳಿದರು.

‘ನಲ್ಲೂರು ವಲಯದ ವ್ಯಾಪ್ತಿಯಲ್ಲಿ 21 ಸಂಘಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಚಾಲನೆ ನೀಡಲಾಗಿದೆ. ಯೋಜನೆಯ ಮುಖಾಂತರ ಮಹಿಳೆಯರಿಗಲ್ಲದೆ ಪುರುಷರಿಗೂ ಸ್ವ ಸಹಾಯ ಸಂಘ ರಚನೆ ಮಾಡಿಕೊಳ್ಳುವ ಯೋಜನೆಯಿದೆ. ರೈತ ಮಹಿಳೆಯರಿಗೆ ಹಲವು ಕಡೆ ಪ್ರವಾಸ ಕೈಗೊಂಡು ಪ್ರಗತಿ ಹೊಂದಿರುವ ಮಹಿಳೆಯರಿಂದ ಜಾಗೃತಿ ಮೂಡಿಸಲಾಲಾಗುತ್ತಿದೆ’ ಎಂದು ಹೇಳಿದರು.

ವಕೀಲೆ ವರಲಕ್ಷ್ಮಿ, ಸಂಘದ ಮೇಲ್ವಿಚಾರಕಿ ನೇತ್ರಾವತಿ, ಪ್ರತಿನಿಧಿ ಸವಿತ, ಪ್ರಭಾವತಿ, ಮಲ್ಲೇಪುರ ಸಂಘದ ಪ್ರತಿನಿಧಿ ಲಕ್ಷ್ಮಿದೇವಮ್ಮ, ಸೇವಾ ಪ್ರತಿನಿಧಿ ಮಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.