ADVERTISEMENT

ದೇವನಹಳ್ಳಿ: ಕೃಷಿ ಜಾಗೃತಿ ದಳದ ಅಧಿಕಾರಿಗಳು ದಾಳಿ, 6 ಪ್ರಕರಣ ದಾಖಲು

ನೋಂದಣಿ ರಹಿತ ಕಂಪನಿಗಳ ಕೃಷಿ ಪರಿಕರ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 7:54 IST
Last Updated 2 ಸೆಪ್ಟೆಂಬರ್ 2020, 7:54 IST
ಕೃಷಿ ಪರಿಕರ ಮಾರಾಟ ಮಳಿಗೆ ಪರಿಶೀಲಿಸುತ್ತಿರುವ ಜಾಗೃತ ದಳದ ಅಧಿಕಾರಿಗಳು
ಕೃಷಿ ಪರಿಕರ ಮಾರಾಟ ಮಳಿಗೆ ಪರಿಶೀಲಿಸುತ್ತಿರುವ ಜಾಗೃತ ದಳದ ಅಧಿಕಾರಿಗಳು   

ದೇವನಹಳ್ಳಿ: ‘ತಾಲ್ಲೂಕಿನ ವಿಜಯಪುರ ಮತ್ತು ದೇವನಹಳ್ಳಿ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರಾಜ್ಯ ಕೇಂದ್ರೀಯ ಕೃಷಿ ಜಾಗೃತಿ ದಳ ನಡೆಸಿದ ದಾಳಿಯಲ್ಲಿ ಆರು ಕೃಷಿ ಪರಿಕರ, ಜೈವಿಕ ಗೊಬ್ಬರ ಬೀಜ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಹೇಳಿದರು.

ದಾಳಿ ಕುರಿತು ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ‘ಕೇಂದ್ರಿಯ ಕೃಷಿ ಜಾಗೃತ ದಳದ ಹೆಚ್ಚುವರಿ ಕೃಷಿ ನಿರ್ದೇಶಕ ಅನೂಪ್, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ್, ಉಪಕೃಷಿ ನಿರ್ದೇಶಕಿ ಜಾವಿದಾ ಅವರ ತಂಡ ದಾಳಿ ನಡೆಸಿತ್ತು. ನೋಂದಣಿ ಇಲ್ಲದ ವಿವಿಧ ಖಾಸಗಿ ಕಂಪನಿಗಳಿಂದ ಜೈವಿಕ ಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕಲು ಜಾಗೃತಿ ದಳದ ತಂಡ ಅನಿರೀಕ್ಷಿತವಾಗಿ ಗ್ರಾಹಕರ ಸೊಗಿನಲ್ಲಿ ದಾಳಿ ನಡೆಸಿತ್ತು. ಕೃಷಿ ಪರಿಕರ ಜೈವಿಕ ಗೊಬ್ಬರ, ಬೀಜ ಮತ್ತು ಕೀಟನಾಶಕ ಮಾರಾಟ ಮಾಡಲು ಅಧಿಕೃತ ಪರವಾನಗಿ ಪಡೆದಿರಬೇಕು. ಇಲಾಖೆ ನಿಯಮದಂತೆ ನವೀಕರಣ ಮಾಡಿಸಬೇಕು. ನೊಂದಣಿ ಮಾಡಿಸದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂದು ಹೇಳಿದರು .

ಗುಣ ಮಟ್ಟದ ಕೃಷಿ ಪರಿಕರ ಮತ್ತು ಬೀಜಗಳನ್ನು ನೀಡುವ ಖಾಸಗಿ ಕಂಪನಿಗಳ ಹೆಸರಿನಲ್ಲಿಯೇ ಆದೇ ಮಾದರಿಯಲ್ಲಿ ಹಾಗೂ ಬೆಲೆಯಲ್ಲಿ ಕಳಪೆ ಪರಿಕರಗಳನ್ನು ವಿತರಿಸುವವರು ಇದ್ದಾರೆ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು .

ADVERTISEMENT

‘ರೈತರು ಅವಸರದಲ್ಲಿ ಹಿಂದೆ ಮುಂದೆ ಯೋಚಿಸದೆ ಪರಿಕರ, ಬೀಜ, ಜೈವಿಕ ಗೊಬ್ಬರ ಖರೀದಿಗೆ ಮುಂದಾಗಬಾರದು. ಅನುಮಾನ ಬಂದಾಗ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಖರೀದಿಸಿದ ಪ್ರತಿಯೊಂದು ವಸ್ತುವಿಗೂ ರಸೀದಿ ಪಡೆಯಬೇಕು. ಅನಧಿಕೃತ ಮಾರಾಟಗಾರರು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಸಂಶಯಾತ್ಮಕ ಜೈವಿಕ ಗೊಬ್ಬರ ಕೀಟನಾಶಕಗಳನ್ನು ಮಾರಾಟ ಮಾಡುತ್ತಿರುವ ಐದು ಪ್ರಕರಣಗಳ ಬಗ್ಗೆ ಮಾರಾಟ ವಸ್ತುಗಳನ್ನು ವಶಕ್ಕೆ ಪಡೆದುಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.