ADVERTISEMENT

ದೇವನಹಳ್ಳಿ: ಮಹಿಳೆಯರ ರಕ್ಷಾಕವಚ ‘ಅಕ್ಕಪಡೆ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:57 IST
Last Updated 10 ಜನವರಿ 2026, 4:57 IST
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಿಳೆ–ಮಕ್ಕಳ ರಕ್ಷಣೆಗೆ ರೂಪುಗೊಂಡ ‘ಅಕ್ಕ ಪಡೆ’ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಪಂ ಸಿಇಒ ಕೆ.ಎನ್‌.ಅನುರಾಧ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಿಳೆ–ಮಕ್ಕಳ ರಕ್ಷಣೆಗೆ ರೂಪುಗೊಂಡ ‘ಅಕ್ಕ ಪಡೆ’ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಪಂ ಸಿಇಒ ಕೆ.ಎನ್‌.ಅನುರಾಧ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.   

ದೇವನಹಳ್ಳಿ: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ನೆರವು, ರಕ್ಷಣೆ ಹಾಗೂ ಕಾನೂನು ಅರಿವು ನೀಡುವ ಉದ್ದೇಶದಿಂದ ಜಾರಿಗೊಂಡಿರುವ ‘ಅಕ್ಕ ಪಡೆ’ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಅಪಾಯದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ಕ್ಷಣಮಾತ್ರದಲ್ಲೇ ಸ್ಪಂದಿಸುವ ವ್ಯವಸ್ಥೆಯೇ ಅಕ್ಕ ಪಡೆಯ ಮೂಲ ಉದ್ದೇಶ. ಸಹಾನುಭೂತಿ, ಸೇವಾಭಾವ ಮತ್ತು ಸಮುದಾಯ ಸ್ಪಂದನೆಯೊಂದಿಗೆ ಅಕ್ಕ ಪಡೆ ಸಮಾಜದ ಸುರಕ್ಷತಾ ಘಟಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಜಿಲ್ಲೆಯಲ್ಲಿ ನಾಲ್ವರು ಮಹಿಳಾ ಗೃಹರಕ್ಷಕರನ್ನೊಳಗೊಂಡ ಅಕ್ಕ ಪಡೆ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಏನಿದು ಅಕ್ಕಪಡೆ?: ದೌರ್ಜನ್ಯ, ಹಿಂಸೆ, ಶೋಷಣೆ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಒದಗಿಸುವುದು, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅವರ ಸುರಕ್ಷತೆ ಮತ್ತು ಘನತೆ ಕಾಯ್ದುಕೊಳ್ಳುವುದು ಪಡೆಯ ಪ್ರಮುಖ ಗುರಿ. ಕಾನೂನು ಹಕ್ಕುಗಳು, ಸುರಕ್ಷತಾ ಕ್ರಮಗಳು, ಸಹಾಯವಾಣಿ ಸೇವೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಭಯಮುಕ್ತ ವಾತಾವರಣ ನಿರ್ಮಿಸುವ ಆಶಯ ಇದಾಗಿದೆ.

ಕಾರ್ಯವೈಖರಿ ಹೇಗೆ? : ತರಬೇತಿ ಪಡೆದ ಅಕ್ಕ ಪಡೆ ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಿ, ಮಹಿಳೆ–ಮಕ್ಕಳಿಂದ ಬರುವ ತುರ್ತು ಕರೆಗಳಿಗೆ ತಕ್ಷಣ ಸ್ಪಂದಿಸಲಿವೆ. ಶಾಲೆ–ಕಾಲೇಜು, ಮಾರುಕಟ್ಟೆ, ಬಸ್ ಹಾಗೂ ರೈಲು ನಿಲ್ದಾಣಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಸಹಾಯವಾಣಿ, ಎನ್‌ಜಿಒಗಳು, ಕಾನೂನು ನೆರವು ಕೇಂದ್ರಗಳು ಮತ್ತು ಆಶ್ರಯ ತಾಣಗಳೊಂದಿಗೆ ಸಮನ್ವಯ ಸಾಧಿಸಿ ಸಂತ್ರಸ್ತರಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ಯಾರಿಗೆ ರಕ್ಷಣೆ?: ಕೌಟುಂಬಿಕ ಹಿಂಸೆ, ಕಿರುಕುಳ, ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು, ಹದಿಹರೆಯದ ಬಾಲಕಿಯರು, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಬಾಲಭಿಕ್ಷಾಟನೆ, ಕಳ್ಳಸಾಗಣೆ, ಮಾದಕ ವಸ್ತುಗಳ ದುರುಪಯೋಗಕ್ಕೆ ಒಳಗಾದ ಮಕ್ಕಳು ಈ ಯೋಜನೆಯ ನೇರ ಫಲಾನುಭವಿಗಳು. ಜಾಗೃತಿ ಮೂಲಕ ಇಡೀ ಸಮಾಜವೂ ಇದರ ಪ್ರಯೋಜನ ಪಡೆಯಲಿದೆ.

ಸಮಯ–ವ್ಯಾಪ್ತಿ: ಜಿಲ್ಲಾ ಮಟ್ಟದಲ್ಲಿ ಮಹಿಳಾ ಗೃಹರಕ್ಷಕರನ್ನೊಳಗೊಂಡ ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಶಾಲೆ–ಕಾಲೇಜು, ಮಹಿಳಾ ಹಾಗೂ ಬಾಲಕಿಯರ ಹಾಸ್ಟೆಲ್, ಉದ್ಯಾನವನ, ಸಿನಿಮಾ ಮಂದಿರ, ಮಾರುಕಟ್ಟೆ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ತಂಡವನ್ನು ನಿಯೋಜಿಸಲಾಗುತ್ತದೆ.

ಪ್ರಮುಖ ಜವಾಬ್ದಾರಿಗಳು: ಮಹಿಳಾ ಕಿರುಕುಳ ಪ್ರಕರಣಗಳನ್ನು ಪೊಲೀಸ್ ಠಾಣೆಗೆ ವರದಿ ಮಾಡುವುದು, ಸ್ವರಕ್ಷಣೆ ತರಬೇತಿ ನೀಡುವುದು, ಗುಡ್ ಟಚ್–ಬ್ಯಾಡ್ ಟಚ್ ಅರಿವು ಮೂಡಿಸುವುದು, ಪೋಕ್ಸೋ, ಬಾಲ್ಯವಿವಾಹ, ಮಹಿಳೆ–ಮಕ್ಕಳ ಕಳ್ಳಸಾಗಣೆ, ಮಾದಕ ವಸ್ತು ದುರುಪಯೋಗದ ವಿರುದ್ಧ ಜಾಗೃತಿ, ಸಹಾಯವಾಣಿ ಸಂಖ್ಯೆ 1098, 181, 112 ಬಗ್ಗೆ ಮಾಹಿತಿ ನೀಡುವುದು, ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ, ಮಕ್ಕಳ ಭಿಕ್ಷಾಟನೆ ತಡೆ ಹಾಗೂ ರಕ್ಷಿಸಲ್ಪಟ್ಟವರಿಗೆ ಪುನರ್ವಸತಿ ಕಲ್ಪಿಸುವುದು ಅಕ್ಕ ಪಡೆಯ ಪ್ರಮುಖ ಕರ್ತವ್ಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.