ADVERTISEMENT

ದೊಡ್ಡಬಳ್ಳಾಪುರ: ರಸ್ತೆ, ರಾಜಕಾಲುವೆ ಒತ್ತುವರಿ ಆರೋಪ

ರಾಜೀವ್‌ಗಾಂಧಿ ಕಾಲೊನಿ ನಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:20 IST
Last Updated 1 ಆಗಸ್ಟ್ 2024, 15:20 IST
ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿ ವಿರೋಧಿಸಿ ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿ ವಿರೋಧಿಸಿ ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ಕೂಲಿ ಕಾರ್ಮಿಕರು, ಬಡವರೇ ವಾಸವಾಗಿರುವ ರಾಜೀವ್‌ಗಾಂಧಿ ಕಾಲೊನಿಗೆ ಸಂಪರ್ಕ ರಸ್ತೆ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಡಾವಣೆಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ರಾಜೀವ್ ಗಾಂಧಿ ಕಾಲೊನಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯ ಪಕ್ಕದ ರಾಜಕಾಲುವೆ ಜೊತೆಗೆ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ. ಇದರ ವಿರುದ್ಧ ನಗರ ಸಭೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನನಿರತರು ಆಗ್ರಹಿಸಿದರು.

ರಸ್ತೆಯು 66 ಅಡಿ ವಿಸ್ತಿರ್ಣದ್ದಾಗಿದೆ. ಇದೀಗ ರಸ್ತೆಯನ್ನು 20 ಅಡಿ ಕಿರಿದು ಮಾಡಲಾಗುತ್ತಿದೆ. ಇಷ್ಟಕ್ಕೆ ತೃಪ್ತರಾಗದ ಬಡಾವಣೆ ನಿರ್ಮಾಣ ಮಾಡುತ್ತಿರುವವರು ಮಳೆ ನೀರು ಹರಿದು ಹೋಗುವ ರಾಜಕಾಲುವೆ ಮುಚ್ಚಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಮುಖಂಡ ಶಶಿಕುಮಾರ್ ದೂರಿದರು.

ADVERTISEMENT

ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಈ ಹಿಂದಿನಿಂದಲೂ ರಾಜಕಾಲುವೆ ಮೂಲಕ ಕಾಲೊನಿಯ ಮಳೆನೀರು ಹರಿದು ಹೋಗುತಿತ್ತು. ಈಗ ಅದನ್ನು ಮುಚ್ಚುವುದು ಸರಿಯಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಗುರುತಿಸುವವರೆಗೂ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ರಾಜೀವ್ ಗಾಂಧಿ ಕಾಲೊನಿ ನಿರ್ಮಾಣವಾಗಿ 20 ವರ್ಷ ಕಳೆದರೂ ಈವರೆಗೆ ಸಮರ್ಪಕವಾದ ಮೂಲ ಸೌಕರ್ಯ ಒದಗಿಸಿಲ್ಲ. ಬಡವರನ್ನು ಬಡವರಂತೆಯೇ ಇಡಲು ಇಂತಹ ಕೆಲಸವನ್ನು ಮಾಡಲಾಗುತ್ತಿದೆ. ಸೌಕರ್ಯ ಕೊಡಲು ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ. ಬಲಾಢ್ಯರು ರಸ್ತೆ ಕಬಳಿಸುತ್ತಿದ್ದರು ಸಹ ಪ್ರಶ್ನೆ ಮಾಡಬೇಕಾದ ವಾರ್ಡ್‌ನ ಸದಸ್ಯರು ಸುಮ್ಮನ್ನಾಗಿದ್ದಾರೆ ಎಂದು ಕಾಲೊನಿಯ ಸ್ಥಳೀಯ ಮುಖಂಡರಾದ ಪರಮೇಶ್, ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ನಾಮಿನಿ ಸದಸ್ಯ ಕಾಂತರಾಜು, ಸ್ಥಳೀಯರಾದ ಅಂಜಿ, ಪ್ರವೀಣ್, ಶಂಕರಪ್ಪ, ನೂತನ್, ಉಮೇಶ, ವೆಂಕಟೇಶಪ್ಪ ಇದ್ದರು.

ಒತ್ತುವರಿ ತೆರವು ಭರವಸೆ

ರಾಜೀವ ಗಾಂಧಿ ಕಾಲೊನಿಯ ನಿವಾಸಿಗಳ ಪ್ರತಿಭಟನೆಗೆ ಮಣಿದು ಸ್ಥಳಕ್ಕೆ ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಭೇಟಿ ನೀಡಿ ಎರಡು ದಿನಗಳಲ್ಲಿ ಸರ್ವೇ ನಡೆಸಿ ಒತ್ತುವರಿ ಜಾಗವನ್ನು ತೆರವು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.