ADVERTISEMENT

ಅಮಾನಿಕೆರೆ ಏರಿಯ ಸಂಚಾರ, ಸವಾರರಿಗೆ ಸಂಚಕಾರ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 3 ಜೂನ್ 2025, 6:26 IST
Last Updated 3 ಜೂನ್ 2025, 6:26 IST
ವಿಜಯಪುರ ಅಮಾನಿಕೆರೆ ಏರಿಯ ಇಕ್ಕಟ್ಟಾದ ರಸ್ತೆಯಲ್ಲಿ ತಡೆಗೋಡೆ ಇಲ್ಲದಿರುವುದು
ವಿಜಯಪುರ ಅಮಾನಿಕೆರೆ ಏರಿಯ ಇಕ್ಕಟ್ಟಾದ ರಸ್ತೆಯಲ್ಲಿ ತಡೆಗೋಡೆ ಇಲ್ಲದಿರುವುದು   

ವಿಜಯಪುರ: ಪಟ್ಟಣಕ್ಕೆ ಹೊಂದಿಕೊಂಡಿರುವ ವಿಜಯಪುರ ಅಮಾನಿಕೆರೆ ಏರಿ ಮೇಲಿನ ರಸ್ತೆಗೆ ಸುರಕ್ಷತಾ ತಡೆಗೋಡೆಗಳಿಲ್ಲದ ಕಾರಣ ಚಾಲಕರು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡುವಂತಾಗಿದೆ.

ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸುವ ವಾಹನ ಸವಾರರು ಈ ಕೆರೆ ಏರಿ ಮೇಲಿನ ರಸ್ತೆಯಿಂದಲೇ ಸಾಗಬೇಕು. ನಿತ್ಯ ಸಾವಿರಾರು ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಕೆರೆ ಏರಿ ರಸ್ತೆ ಹೆಚ್ಚು ಸುರಕ್ಷತೆವಿಲ್ಲದ ಕಾರಣ ಪ್ರಾಣ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಮಳೆ ಹಾಗೂ ಎಚ್.ಎನ್ ವ್ಯಾಲಿ ನೀರಿನಿಂದ ಎರಡು ಬಾರಿ ಕೆರೆ ಕೋಡಿ ಹರಿದಿದೆ. ಸದ್ಯಕ್ಕೆ ವ್ಯಾಲಿ ನೀರು ಹರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಏರಿಯಲ್ಲಿ ವಾಹನಗಳ ಸಂಚಾರದ ವೇಳೆ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದರೆ ಅನಾಹುತ ಕಟ್ಟಿಟ್ಟಬುತ್ತಿ.

1 ಕಿ.ಮೀನಷ್ಟು ಕೆರೆ ಏರಿ: ಕೆರೆ ಏರಿ ಮೇಲಿನ ರಸ್ತೆಯು ಸುಮಾರು 1 ಕಿ.ಮೀ ಹೆಚ್ಚಿದೆ. ಏರಿಯಲ್ಲಿ ನಾಲ್ಕು ಕಡೆ ಅಪಾಯಕಾರಿ ತಿರುವುಗಳಿವೆ. ಏರಿಯ ತಿರುವಿನಲ್ಲಿ ಒಂದು ಕಡೆ ಅಳವಡಿಸಿರುವ ಅಲ್ಯುಮಿನಿಯಂ ಮಿಶ್ರಿತ ಕಬ್ಬಿಣದ ಪಟ್ಟಿ ಕಿತ್ತು ಬಂದಿದೆ. ಒಂದು ಕಡೆ ಕಾಲುವೆಯ ಕಲ್ಲು ಕಟ್ಟಡದ ತಡೆಗೋಡೆ ಕಳಚಿದೆ. ರಸ್ತೆಯುದ್ದಕ್ಕೂ ಎಡ ಬಲಕ್ಕೆ ತಡೆಗೋಡೆ ಇಲ್ಲವಾಗಿದೆ.

ADVERTISEMENT

ರಸ್ತೆಯೂ ಹಳ್ಳ ದಿನ್ನೆಗಳಿಂದ ಕೂಡಿದ್ದು, ಎಡ ಬಲಗಡೆ ಗಿಡಗಂಟಿಗಳು ಹೆಚ್ಚಾಗಿ ಬೆಳೆದಿದೆ. ರಸ್ತೆಯ ಅಗಲೀಕರಣವಾಗದಿರುವುದು, ರಸ್ತೆಗೆ ವಿದ್ಯುತ್ ದೀಪಗಳ ಅಳವಡಿಸದಿರುವುದು ರಾತ್ರಿ ವೇಳೆಯ ಸಂಚಾರ ಅಪಾಯಕಾರಿಯಾಗಿದೆ.

ಕೆರೆ ಮಲೀನ: ಕೆರೆಯ ಒಂದು ಬದಿಯಲ್ಲಿ ಜೊಂಡು ಕಳೆ ಬೆಳೆಯುತ್ತಿದೆ. ಅಲ್ಲದೇ ಕಿಡಿಗೇಡಿಗಳು ಕೆರೆಗೆ ತ್ಯಾಜ್ಯ, ಹಳೆಯ ಕಟ್ಟಡದ ಅವಶೇಷಗಳನ್ನು ಸುರಿಯುವ ಮೂಲಕ ಕೆರೆಯನ್ನು ಮಲೀನಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲೇ ಎಚ್ಚೇತ್ತುಕೊಂದು ಜೊಂಡು ಕಳೆ ತೆರವುಗೊಳಿಸಿದರೆ ಕೆರೆ ಮಲೀನವನ್ನು ತಡೆಯಬಹುದಾಗಿದೆ. ಕೆರೆಗೆ ತ್ಯಾಜ್ಯ ಸುರಿಯುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಸೂಚನಾ ಫಲಕವಿಲ್ಲ!
ವಿಜಯಪುರ ಅಮಾನಿಕೆರೆಯ ಏರಿನ ಮೇಲಿನ ಇಕ್ಕಟ್ಟಾದ ರಸ್ತೆ, ಅಪಾಯಕಾರಿ ತಿರುವುಗಳು ಇರುವುದರಿಂದ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಅಪಾಯಕಾರಿ ತಿರುವಿನಲ್ಲಿ ಸುರಕ್ಷತಾ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಅಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.