ADVERTISEMENT

ಲಕ್ಷ ದೀಪೋತ್ಸವಕ್ಕೆ ಅಂಬಾರಿ ಮೆರುಗು

ದೇವನಹಳ್ಳಿ: ಮನ ಸೆಳೆದ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:52 IST
Last Updated 6 ಡಿಸೆಂಬರ್ 2022, 5:52 IST
ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ದೇವನಹಳ್ಳಿ:ಪಟ್ಟಣದ ಐತಿಹಾಸಿಕ ಶ್ರೀವೇಣುಗೋಪಾಲ ಸ್ವಾಮಿ ಲಕ್ಷ ದೀಪೋತ್ಸವ ಕಾರ್ಯಕ್ರಮದ 5ನೇ ದಿನವಾದ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋಟೆ ದೇಗುಲ ಸಾಕ್ಷಿಯಾಯಿತು.

ಹಲವಾರು ವರ್ಷಗಳ ನಂತರ ನಡೆಯುತ್ತಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ನಿತ್ಯವೂ ವಿಶೇಷ ಪೂಜಾ ಕೈಂಕರ್ಯ, ಕ್ರೀಡಾ, ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಮುಂಜಾನೆಯಿಂದಲೇ ವೇದಘೋಷಗಳೊಂದಿಗೆ ಪ್ರಾರಂಭವಾದ ಧಾರ್ಮಿಕ ವಿಧಿವಿಧಾನಗಳು, ಪುಣ್ಯಹ ವೇದ ಪಾರಾಯಣ, ಶ್ರೀಸೂಕ್ತ ಪುರುಷ ಸೂಕ್ತ ಹೋಮ, ಕಲ್ಯಾಣೋತ್ಸವದಲ್ಲಿ ಗೋವಿಂದ ನಾಮ ಸ್ಮರಣೆಯಲ್ಲಿ ಭಕ್ತಗಣ ಪಾಲ್ಗೊಂಡಿತ್ತು. ಭಗವಾನ್‌ ವೇಣುಗೋಪಾಲಸ್ವಾಮಿ ದರ್ಶನದಲ್ಲಿ ಭಕ್ತರು ನಿರತರಾಗಿದ್ದರು.

ADVERTISEMENT

ವಾಸುಕಿ ನಂದನ ಗೋಪಾಲಕೃಷ್ಣ ಪ್ರಭುವಿನ ಕಲ್ಯಾಣೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಭಕ್ತರು, ಧಾರ್ಮಿಕ ಪೂಜೆಯನ್ನು ಕಣ್ತುಂಬಿಕೊಂಡರು.

ಆನೆ ಮೇಲೆ ಅಂಬಾರಿ:ಮಧ್ಯಾಹ್ನದ ವೇಳೆ ರಾಜ ಬೀದಿಗಳಲ್ಲಿ ಗಜರಾಜನದ್ದೇ ಸದ್ದು. ಜೂಲ ಮುಕುಡವನ್ನು ತೊಟ್ಟ ಆನೆಯು ವಿವಿಧ ಹೂವು, ವಿಶಿಷ್ಟ ಒಡವೆಗಳಿಂದ ಶೃಂಗಾರಗೊಂಡಿದ್ದ ವೇಣುಗೋಪಾಲ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತು ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕಿತು. ಕೋಟೆ ದೇಗುಲದಿಂದ ಚೌಕದ ಮಾರ್ಗವಾಗಿ ಮರಳು ಬಾಗಿಲು, ಹಳೆ ಬಸ್‌ ನಿಲ್ದಾಣ ಬಳಿಯ ಚೌಡೇಶ್ವರಿ ದೇಗುಲದ ಮಾರ್ಗವಾಗಿ ಇಡೀ ಪಟ್ಟಣವನ್ನು ಒಂದು ಸುತ್ತು ಹಾಕಿದ್ದು ರೋಮಾಂಚನವಾಗಿತ್ತು.

ಕುಸ್ತಿ ಕಲಿಗಳ ಜಟಾಪಟಿ: ಲಕ್ಷ ದೀಪೋತ್ಸವ ಪ್ರಯುಕ್ತ ರಾಷ್ಟ್ರಮಟ್ಟದ ಮಟಿ ಕುಸ್ತಿ ಪಂದ್ಯಾವಳಿಗೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನ ಸಿದ್ಧಗೊಂಡಿತ್ತು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಪೈಲ್ವಾನ್‌ಗಳು ಮಟ್ಟಿ ಕುಸ್ತಿಯಲ್ಲಿ ತಮ್ಮ ಬಾಹುಬಲ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳಲ್ಲಿ ದೇಸಿ ಕ್ರೀಡೆ ಬಗ್ಗೆ ಅಭಿಮಾನ ಮೂಡುವಂತೆ ಮಾಡಿದರು. 120 ಜೋಡಿ ಕುಸ್ತಿಯಲ್ಲಿ ಭಾಗವಹಿಸಿದ್ದು, ಹೊಸ ಇತಿಹಾಸ ಸೃಷ್ಟಿಗೆ ನಾಂದಿ ಹಾಡಿತು.

ನಾಟಕ, ಜನಪದ ಗೀತೆ: ಸಂಜೆ ವಿಷ್ಣು ಸಹಸ್ರನಾಮ, ತುಳಸಿ ಲಕ್ಷಾರ್ಚನೆಯು ದೇಗುಲದಲ್ಲಿ ಪಠಣಗೊಳ್ಳುತ್ತಿದ್ದರೆ ಕೃಷ್ಣಪ್ಪನವರ ಮಂಟಪದಲ್ಲಿ ಸಿ. ಅಶ್ವತ್ಥ್‌ ಕಲಾ ಬಳಗದಿಂದ ಜನಪದ ಗೀತೆಗಳು ಝೇಂಕರಿಸುತ್ತಿದ್ದವು. ಹಳೇ ಬಸ್‌ ನಿಲ್ದಾಣದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಸ್ಥಳೀಯ ಕಲಾವಿದರು ತಯಾರಿಯಲ್ಲಿದ್ದರು.

ಮಂಗಳವಾರ ಎಂದಿನಂತೆ ಬೆಳಿಗ್ಗೆ ಅಭಿಷೇಕ ಪುಣ್ಯಹ ವೇದಪಾರಾಯಣ ವಿಷ್ಣು ಸಹಸ್ರನಾಮ, ಪೂರ್ವಕ ಹೋಮ ಪೂರ್ಣಾಹುತಿ ಇದೆ. ಸಂಜೆ ಲಕ್ಷಮೀ ಸಹಸ್ರನಾಮ ಪಾರಾಯಣ ಪೂರ್ವಕ ಹೋಮ ನಡೆಯಲಿದೆ. ನಂತರ ಗಾಯಕಿ ಎಂ.ಡಿ. ಪಲ್ಲವಿ ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಮಧ್ಯಾಹ್ನ ಕುಸ್ತಿ ಪಂದ್ಯಾವಳಿ ಮುಂದುವರಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.