ADVERTISEMENT

ಮಾಗಡಿ: ₹ 6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ

ಕಾಮಗಾರಿಗೆ ಶಾಸಕ ಬಾಲಕೃಷ್ಣ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:12 IST
Last Updated 3 ಜನವರಿ 2026, 9:12 IST
ಮಾಗಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇಸಿದರು
ಮಾಗಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇಸಿದರು   

ಮಾಗಡಿ: ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ಶಂಕುಸ್ಥಾಪನೆ ಮಾಡಿಸಲಾಗಿತ್ತು. ಆದರೆ ಅನುದಾನ  ಗೊಂದಲದಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಸಮಾಜ ಕಲ್ಯಾಣ ಇಲಾಖೆಯಿಂದ ₹2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಟ್ಟು ₹6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

‌ಪಟ್ಟಣದ ಪುರಸಭೆ ಮುಖ್ಯ ರಸ್ತೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಮೊದಲ ಹಂತವಾಗಿ ಹಣ ಬಿಡುಗಡೆ ಮಾಡಿದ್ದು ಮುಂದಿನ ವರ್ಷ ₹2ಕೋಟಿ ಹಣ ಬಿಡುಗಡೆ ಮಾಡುವ ಎಂದು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಅದಷ್ಟು ಬೇಗ ಅಂಬೇಡ್ಕರ್ ಭವನ ನಿರ್ಮಿಸಿ ತಾಲ್ಲೂಕಿನ ಎಲ್ಲಾ ಕಾರ್ಯಕ್ರಮಗಳು ಇಲ್ಲಿ ನಡೆಯುವಂತೆ ಸಕಲ ವ್ಯವಸ್ಥೆ ಮಾಡಲಾಗುವುದು. ಕಟ್ಟಡದ ಕೆಳ ಅಂತಸ್ತಿನಲ್ಲಿ ಊಟದ ಸಭಾಂಗಣ, ಮೊದಲ ಮಹಡಿಯಲ್ಲಿ ವಿಶ್ರಾಂತಿ ಕೊಠಡಿ, ಎರಡನೆಯ ಅಂತಸ್ತಿನಲ್ಲಿ ಸಭಾಂಗಣ ನಿರ್ಮಾಣ ಮಾಡಲಾಗುವುದು.  ಶುಭ ಸಮಾರಂಭಗಳು ಇಲ್ಲೇ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಅಂಬೇಡ್ಕರ್ ಜಯಂತಿ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುವ ಮೂಲಕ ಅವರ ತತ್ವ ವಿಚಾರಗಳು ಈ ಭವನದಲ್ಲಿ ನಡೆಯುವಂತೆ ಆಗಲಿ ಎಂದು ತಿಳಿಸಿದರು.

ನಿರ್ಮಿತಿ ಕೇಂದ್ರದಿಂದ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತಿದ್ದು, ಅಂಬೇಡ್ಕರ್ ಭವನದ ಮುಂಭಾಗದ ಮುಖ್ಯರಸ್ತೆಯಲ್ಲಿ ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಪುರಸಭೆಗೆ ವಹಿಸಲಾಗುತ್ತದೆ ಎಂದರು.

ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ. ಇಒ ಜೈಪಾಲ್, ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್, ಮುಖಂಡರಾದ ರಂಗಹನುಮಯ್ಯ, ಸಿ. ಜಯರಾಂ, ಕಲ್ಕೆರೆ ಶಿವಣ್ಣ, ಗೋಪಾಲ್ ಕೃಷ್ಣ, ಬಿ.ಟಿ.ವೆಂಕಟೇಶ್, ಪೊಲೀಸ್ ವಿಜಿ, ರೂಪೇಶ್ ಕುಮಾರ್, ತಿಪ್ಪಸಂದ್ರ ಹರೀಶ್, ಮೂರ್ತಿ, ಮಂಜುನಾಥ್, ಕೆಂಪೇಗೌಡ ಭಾಗವಹಿಸಿದ್ದರು.

ಬಸ್‌ ಡಿಪೊಗೆ ತಿಮ್ಮಕ್ಕನ ಹೆಸರು

ಕುದೂರಿನಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಡಿಪೊ ಹಾಗೂ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಾಲುಮರದ ತಿಮ್ಮಕ್ಕ ಅವರ ಹೆಸರು ನಾಮಕರಣ ಮಾಡಲಾಗುವುದು. ಅವರ ಪ್ರತಿಮೆಯನ್ನೂ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಸಾಲುಮರದ ತಿಮ್ಮಕ್ಕನವರ ಹೆಸರು ಶಾಶ್ವತವಾಗಿ ತಾಲೂಕಿನಲ್ಲಿ ಇರುವಂತೆ ಮಾಡಲಾಗುತ್ತದೆ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು. ‘ತಿಮ್ಮಕ್ಕ ನಮ್ಮ ತಾಲೂಕಿಗೆ ಮಾತ್ರ ಸೀಮಿತವಲ್ಲ. ಅವರು ಸಮಾಜದ ಆಸ್ತಿ ಎಲ್ಲಿ ಬೇಕಾದರೂ ಕೂಡ ಅವರ ಸ್ಮಾರಕ ನಿರ್ಮಾಣ ಮಾಡಲಿ. ಇಲ್ಲಿ ಸ್ಮಾರಕದ ಜೊತೆಗೆ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವ ಕೆಲಸ ಮಾಡುತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.