ADVERTISEMENT

ಹೊಸಕೋಟೆ: ಅವಸಾನದತ್ತ ಗಂಗರ ಕಾಲದ ಪ್ರಾಚೀನ ಈಶ್ವರ ದೇವಾಲಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 2:46 IST
Last Updated 11 ಸೆಪ್ಟೆಂಬರ್ 2025, 2:46 IST
   

ಹೊಸಕೋಟೆ: ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮದ ಕೆರೆಯಲ್ಲಿ ಹೊಯ್ಸಳರ ಕಾಲದ ಸೋಮೇಶ್ವರ ದೇವಾಲಯವು ನಿಧಿಗಳ್ಳರ ಹಾವಳಿಯಿಂದ ಅವಸಾನದತ್ತ ಸಾಗಿದ್ದು, ಕುಸಿಯುವ ಸ್ಥಿತಿ ತಲುಪಿದೆ.

ಗಂಗರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡು, ಹೊಯ್ಸಳರ ಕಾಲದಲ್ಲಿ ಅಭಿವೃದ್ಧಿ ಆಗಿರುವ ಈ ದೇಗುಲ ತನ್ನ ವೈಭವ ಕಳೆದುಕೊಂಡು ಪಾಳು ಕೊಂಪೆಯಾಗಿದೆ. ದೇವಾಲಯದ ಗೋಡೆ, ಶಿಖರದ ಮೇಲೆ ಗಿಡ ಗಂಟೆ ಬೆಳೆದು ಬಿರುಕುಬಿಟ್ಟಿದೆ.

ಪುರಾತತ್ತ್ವಇಲಾಖೆ ಸಂಗ್ರಹಾಲಯಗಳು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಲ್ಲೊಂದು ಸ್ಮಾರಕ ಇದೆ ಎಂಬುದೇ ಗೊತ್ತಿಲ್ಲ ಎಂಬುದಕ್ಕೆ ದೇಗುಲ ದುಸ್ಥಿತಿಗೆ ತಲುಪಿರುವುದೇ ಸಾಕ್ಷಿ.

ADVERTISEMENT

ವಿಜಯನಗರ ಕಾಲಕ್ಕೆ ಈ ದೇವಾಲಯದ ಗಡಿ ಗುರುತಿಸಿ ನಾಲ್ಕು ದಿಕ್ಕಿಗೂ ನಂದಿ ಮುದ್ರೆ ಕಲ್ಲನ್ನು ಗಡಿ ಕಲ್ಲಾಗಿ ನೆಡಲಾಗಿದೆ. ಆದರೆ ದೇವಾಲಯದ ಜಾಗ ಒತ್ತುವರಿಯಾಗಿದೆ. ಕೂಡಲೇ ಪುರಾತತ್ವ ಇಲಾಖೆ ಹಾಗೂ ಪಂಚಾಯಿತಿಯವರು ಒತ್ತುವರಿ ತೆರವುಗೊಳಿಸಿ, ದೇಗುಲ ಸುತ್ತ ತಂತಿ ಬೆಲೆ ಅಳವಡಿಸಬೇಕು. ದೇಗುಲ ಜೀರ್ಣೋದ್ಧಾರಗೊಳಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಬೇಕೆಂದು ಸ್ಥಳೀಯರ ಒತ್ತಾಯ.

ಗಂಗರ ಕಾಲದ ಶ್ರೀಪುರುಷ ಕ್ರಿ.ಶ 750ರಲ್ಲಿ ಸೋಮೇಶ್ವರ ಕಟ್ಟಿಸಿದೆ. ಚೋಳರ ಕಾಲದಲ್ಲಿ ದೊಡ್ಡಹುಲ್ಲೂರು ಪ್ರದೇಶವು ಪುಲಿಯೂರುನಾಡು ಆಡಳಿತಕ್ಕೆ ಸೇರಿತು. ಕ್ರಮೇಣ ಚೋಳರ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ಹೊಯ್ಸಳರ ಮೂರನೇ ವೀರಬಲ್ಲಾಳನ ಕಾಲದಲ್ಲಿ ಆತನ ಮಂತ್ರಿಗಳಾದ ದಾಡಿ ಸೋಮೆಯದಣ್ಣಾಯಕ, ಸಿಂಗಯದಣ್ಣಾಯಕ, ವಲ್ಲಪ್ಪದಣ್ಣಾಯಕರಿಂದ ಕ್ರಿ.ಶ 1,320ರಲ್ಲಿ ಕೆರೆಕಟ್ಟೆ, ತೂಬುನ್ನು ಜೀರ್ಣೋದ್ಧಾರ ಮಾಡಿಸಿ, ಅಲ್ಲಿದ್ದ ಇಟ್ಟಿಗೆಯ ಸೋಮೇಶ್ವರ ದೇವಾಲಯವನ್ನು ಚೋಳ ವಾಸ್ತು ಶೈಲಿಯಲ್ಲಿಯೇ ಕಲ್ಲಿನ ದೇವಾಲಯವನ್ನಾಗಿ ಜೀರ್ಣೋದ್ಧಾರ ಮಾಡಿಸಿದ ಎನ್ನುತ್ತಾರೆ ಇತಿಹಾಸಕಾರರು.

ಗಂಗರ ಕಾಲದ ವೀರಗಲ್ಲು ಅನಾಥವಾಗಿ ಬಿದ್ದಿರುವುದು

ದೇವಾಲಯವು 8ನೇ ಶತಮಾನಕ್ಕೆ ಸೇರಿದೆ ಎಂಬುದಕ್ಕೆ ಹಲವು ಕುರುಹುಗಳಿವೆ. ಹೀಗಾಗಿ ಇದರ ಬಗ್ಗೆ ಮತ್ತಷ್ಟು ಅಧ್ಯಯನ ಆಗಬೇಕು.
– ಕೆ.ಆರ್‌. ನರಸಿಂಹನ್, ಶಾಸನ ಸಂಶೋಧಕ
ಸ್ಥಳೀಯರಲ್ಲಿ ಇತಿಹಾಸ ಪ್ರಜ್ಞೆ, ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆ ನಿರ್ಲಕ್ಷ್ಯದಿಂದ ಸ್ಮಾರಕಗಳು ಅವಸಾನದತ್ತ ಸಾಗಿದೆ.
– ಬಸವಯ್ಯ, ಹವ್ಯಾಸಿ ಇತಿಹಾಸ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.