ADVERTISEMENT

ಸಂವಿಧಾನಕ್ಕೆ ಧಕ್ಕೆ ತರುವವರಿಗೆ ತಕ್ಕ ಪಾಠ: ಅನಂತ್‌ ನಾಯಕ

ಶೋಷಿತ, ಹಿಂದುಳಿದ ಜಾತಿಗಳ ಒಕ್ಕೂಟದ ಸಭೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:50 IST
Last Updated 24 ಏಪ್ರಿಲ್ 2024, 4:50 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಮುಖಂಡರ ಸಭೆಯ ನಡೆಸಲಾಯಿತು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಮುಖಂಡರ ಸಭೆಯ ನಡೆಸಲಾಯಿತು   

ಆನೇಕಲ್ : ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿರುವ ಕೋಮುವಾದಿ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ವಕೀಲ ಅನಂತ್‌ ನಾಯಕ ಹೇಳಿದರು.

ತಾಲ್ಲೂಕಿನ ಚಂದಾಪುರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ವೇತನದಲ್ಲಿಯೂ ತಾರತಮ್ಯ ಮಾಡಿದೆ. ಪ್ರಗತಿಪರ ವ್ಯವಸ್ಥೆಯನ್ನು ದೂರಮಾಡಿ ಸನಾತನ ವ್ಯವಸ್ಥೆಯನ್ನು ತರುವ ಪ್ರಯತ್ನ ಮಾಡಿದೆ ಎಂದು ದೂರಿದರು.

ADVERTISEMENT

ಭಾರತದಲ್ಲಿ ಕೃಷಿ ಬಿಕ್ಕಟ್ಟಿನಲ್ಲಿದೆ. ನರೇಂದ್ರ ಮೋದಿ ಅವರ ಅವಧಿಯಲ್ಲಿ 1.74ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಕೀಟನಾಟಕ, ಗೊಬ್ಬರ ಖರೀದೀಸಲು ಸಹ ಆಗುತ್ತಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಬೆಲೆ ಏರಿಕೆ ಉಂಟಾಗಿದೆ ಟೀಕಿಸಿದರು.

ಮೋದಿ ಸರ್ಕಾರದ ಸಚಿವರು ಸಂವಿಧಾನದ ಬದಲಾವಣೆಯ ಮಾತುಗಳನ್ನು ಆಗ್ಗಾಗೆ ಆಡುತ್ತಿದ್ದಾರೆ. ಹಾಗಾಗಿ ಸಂವಿಧಾನ ವಿರೋಧಿ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಲೋಕಸಭೆಯಲ್ಲಿ ತಕ್ಕ ಪಾಠಕಲಿಸಬೇಕು. ದಲಿತರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಹಿಂದೂ–ಮುಸ್ಲಿಂ ಧರ್ಮಗಳ ಸಂಘರ್ಷ ಹೆಚ್ಚಾಗಿದೆ. ಸತ್ಯ-ಸುಳ್ಳು, ಸಂವಿಧಾನ-ಮನುಸ್ಮೃತಿ ಹಾಗೂ ಬಡವರ-ಶ್ರೀಮಂತರ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಹಾಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಕಾಂಗ್ರೆಸ್‌ ಪಕ್ಷ ಅವಶ್ಯಕತೆಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಬಲ ನೀಡಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಬಾಬುರೆಡ್ಡಿ, ಮುಖಂಡರಾದ ಇಂಡ್ಲವಾಡಿ ನಾಗರಾಜು, ಬಿದರಗುಪ್ಪೆ ನರಸಿಂಹಮೂರ್ತಿ, ಲಿಂಗಣ್ಣ, ರಾವಣ, ಸುರೇಶ್‌ ಪೋತಾ, ವೆಂಕಟೇಶಮೂರ್ತಿ, ದೇವರಾಜ್‌ ನಾಯ್ಕ್‌, ದೇವರಾಜು, ಮುನಿರಾಜು, ವಿಜಯಕುಮಾರಿ, ಮಂಜುಳ ರಾಮಕೃಷ್ಣ ಇದ್ದರು.

ಸಂವಿಧಾನ ರಕ್ಷಕರಿಗರ ಬಲ ನೀಡಿ

ಶೋಷಿತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ ಸರ್ವಾಧಿಕಾರ ಮತ್ತು ಸ್ವಾತಂತ್ರ್ಯ ನಡುವೆ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನದ ರಕ್ಷಕರಿಗೆ ಬಲ ನೀಡಬೇಕು. ಕಾಂಗ್ರೆಸ್‌ ಪಕ್ಷ ಜಾತ್ಯತೀತ ಪಕ್ಷವಾಗಿದೆ. ಸ್ವಾತಂತ್ರ್ಯದ ಕಾಲದಿಂದಲೂ ನ್ಯಾಯದ ಪರ ನಿಂತಿದೆ. ಹಿಂದುಳಿದ ವರ್ಗಗಳ ರಕ್ಷಣೆ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ ಎಂದರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ ಬಿಜೆಪಿಯು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸಂವಿಧಾನದ ಬಗ್ಗೆ ನಂಬಿಕೆಯಿಲ್ಲದ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠಕಲಿಸಬೇಕು. ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.