ಆನೇಕಲ್: ರಾಜ್ಯದ ಅತಿದೊಡ್ಡ ಎಪಿಎಂಸಿ ಹಣ್ಣು ಮಾರುಕಟ್ಟೆಯಲ್ಲಿ ಸ್ವಚ್ಛತೆ ಮತ್ತು ಮೂಲ ಸೌಲಭ್ಯ ಕೊರತೆಯಿಂದಾಗಿ ಪ್ರತಿನಿತ್ಯ ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಹಣ್ಣು ಸುರಿದಿರುವುದರಿಂದ ಎಪಿಎಂಸಿ ಹಣ್ಣಿನ ಮಾರುಕಟ್ಟೆ ರಸ್ತೆಗಳು ಗಬ್ಬುನಾರುತ್ತಿವೆ.
ತಾಲ್ಲೂಕಿನ ಹುಸ್ಕೂರು ರಸ್ತೆಯಲ್ಲಿರುವ ಸಿಂಗೇನಅಗ್ರಹಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಸದ ರಾಶಿ, ಗಬ್ಬುನಾರುತ್ತಿರುವ ಹಣ್ಣು, ಗುಂಡಿ ಬಿದ್ದ ರಸ್ತೆಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಎಲೆಕ್ಟ್ರಾನಿಕ್‌ಸಿಟಿಗೆ ಸಮೀಪದಲ್ಲಿದ್ದರೂ ಮತ್ತು ಪ್ರತನಿತ್ಯ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಎಪಿಎಂಸಿ ಮಾರುಕಟ್ಟೆಗೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಆದರೆ, ಮೂಲಸೌಲಭ್ಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ.
ನಾರುವ ಗಬ್ಬು ನಡುವೆಯೇ ಗ್ರಾಹಕರು, ವರ್ತಕರು ವ್ಯಾಪಾರ ವಹಿವಾಟು ನಡೆಸಬೇಕಾಗಿದೆ. ಸುಸಜ್ಜಿತ ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿಯುವಂತಾಗಿದೆ. ಹಣ್ಣುಗಳನ್ನು ಹೊತ್ತು ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.
ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಮಂದಿ ರೈತರು, ವರ್ತಕರು ಭೇಟಿ ನೀಡುತ್ತಾರೆ. ಹಾಗಾಗಿ ಮಾರುಕಟ್ಟೆ ಸಮೀಪ ವಿಶ್ರಾಂತಿ ಗೃಹ ಸ್ಥಾಪಿಸಬೇಕು. ಕಾರ್ಮಿಕರು ಮತ್ತು ದೂರದ ಊರುಗಳಿಂದ ಬರುವವರು ಎಲ್ಲೆಂದರಲ್ಲಿ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಊರುಗಳಿಂದ ಬರುವವರಿಗೆ ರಕ್ಷಣೆ ಒದಗಿಸುವ ಸಲುವಾಗಿ ಪೊಲೀಸ್ ಚೌಕಿ ಸ್ಥಾಪಿಸಬೇಕು. ಇದರಿಂದಾಗಿ ರಕ್ಷಣೆ ಮತ್ತು ಭದ್ರತೆ ಸಿಗುವಂತಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.
ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಹಣ್ಣಿನ ಮಳಿಗೆಗಳಿವೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರತಿನಿತ್ಯ ನೂರಾರು ಮಂದಿ ರೈತರು ತಾವು ಬೆಳೆದ ಹಣ್ಣುಗಳನ್ನು ವಾಹನದ ಮೂಲಕ ಹುಸ್ಕೂರು ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ತರುತ್ತಾರೆ. ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲವಾಗಿದೆ. ಶೌಚಾಲಯ ಸಮಸ್ಯೆಯಿಂದಾಗಿ ರೈತರು, ವರ್ತಕರು ಪರದಾಡುವಂತಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸುಸಜ್ಜಿತ ಸೌಲಭ್ಯ ಕಲ್ಪಿಸಿ ಗ್ರಾಹಕರು, ರೈತರು ಮತ್ತು ವರ್ತಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ರೈತರ ಒತ್ತಾಯಯಾಗಿದೆ.
ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ರಾಜ್ಯ ಹೊರರಾಜ್ಯಗಳಿಂದ ರೈತರು ಬರುತ್ತಾರೆ. ಹಾಗಾಗಿ ಭದ್ರತೆ ದೃಷ್ಠಿಯಿಂದ ಪೊಲೀಸ್ ಠಾಣೆ ನಿರ್ಮಿಸಬೇಕು. ಈಚೆಗೆಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ.ಬಾಬು, ಎಪಿಎಂಸಿ ಹಣ್ಣಿನ ಮಾರುಕಟ್ಟೆ ವರ್ತಕ
ಹುಸ್ಕೂರು ಸಮೀಪದ ಸಿಂಗೇನಅಗ್ರಹಾರದ ಹಣ್ಣಿನ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ.ಮಂಜುನಾಥ್, ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.