ಆನೇಕಲ್: ತಾಲ್ಲೂಕಿನಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ಬಸ್ ತಂಗುದಾಣಗಳು ಬಟ್ಟೆ ಅಂಗಡಿಯಾಗಿ, ಮಲಗುವ ತಾಣವಾಗಿ ಬದಲಾಗಿದ್ದು, ಕೆಲವೆಡೆ ಗಿಡಗಂಟಿ ಬೆಳೆದು ಅಧ್ವಾನಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
ಆನೇಕಲ್ ತಾಲ್ಲೂಕಿನ ಹೃದಯಭಾಗದಲ್ಲಿರುವ ಚಂದಾಪುರದ ಬಸ್ ನಿಲ್ದಾಣವು ಬಟ್ಟೆ ಅಂಗಡಿ, ಸೊಪ್ಪು ಮತ್ತು ಹೂವು ಮಾರಾಟ ಮಾಡುವ ಮಾರ್ಕೆಟ್ ಸ್ಥಳವಾಗಿದೆ. ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ವ್ಯಾಪಾರ ಮತ್ತು ವಹಿವಾಟು ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲಿಯೇ ಕಾಯಬೇಕಿದೆ. ಚಂದಾಪುರ-ದೊಮ್ಮಸಂದ್ರ ರಸ್ತೆಯ ಬಸ್ ನಿಲ್ದಾಣವು ಸಾರ್ವಜನಿಕರ ವಿಶ್ರಾಂತಿ ಕೋಣೆಯಂತಾಗಿದೆ.
ತಾಲ್ಲೂಕಿನ ಬಳ್ಳೂರು ಗ್ರಾಮದ ಬಸ್ ತಂಗುದಾಣ ಗಿಡ ಗಂಟಿಗಳಿಂದ ಮುಚ್ಚಿ ಹೋಗಿದೆ. ಇದು ಇದ್ದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ಬಸ್‌ಗೆ ಕಾಯುವವರು ಮಳೆ, ಗಾಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಸ್ ನಿಲ್ದಾಣಗಳನ್ನು ಮಾಡಲಾಗಿರುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪುರಸಭೆಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ತಂಗುದಾಣಗಳು ಇದ್ದರೂ ಇಲ್ಲದಂತಾಗಿದೆ.
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ
ವಿವಿಧ ಯೋಜನೆಗಳಡಿಯಲ್ಲಿ ಗ್ರಾಮಗಳಿಗೆ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳು ಬಸ್ ತಂಗುದಾಣಗಳ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿವೆ. ಕನಿಷ್ಠ ಸ್ವಚ್ಛತೆಯ ಸೌಲಭ್ಯವನ್ನು ನೀಡಲಾಗದ ಪರಿಸ್ಥಿತಿ ಆನೇಕಲ್ ತಾಲ್ಲೂಕಿನ ಬಸ್ ತಂಗುದಾಣಗಳಲ್ಲಿ ನಿರ್ಮಾಣವಾಗಿದೆ.
ಸ್ವಚ್ಛ ಭಾರತ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಬಸ್ ನಿಲ್ದಾಣಗಳನ್ನು ಸ್ವಚ್ಛ ಪಡಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಬಸ್ ತಂಗುದಾಣಗಳು ಸ್ವಚ್ಛತೆ ಇಲ್ಲದೇ ಗಬ್ಬು ನಾರುವಂತಾಗಿದೆ. ತಾಲ್ಲೂಕಿನ ಬಹುತೇಕ ಎಲ್ಲಾ ಬಸ್ ತಂಗುದಾಣಗಳಲ್ಲಿಯೂ ಇದೇ ಪರಿಸ್ಥಿತಿಯಿರುವುದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಾಂಧಿ ಜಯಂತಿಯ ಸ್ವಚ್ಛತಾ ಕಾರ್ಯಕ್ರಮಗಳನ್ನು ಬಸ್ ತಂಗುದಾಣಗಳ ಸ್ವಚ್ಛತೆಗಾಗಿ ಮೀಸಲಿಡಬೇಕು ಎಂಬುದು ಆನೇಕಲ್ ತಾಲ್ಲೂಕಿನ ಜನತೆ ಒತ್ತಾಯಿದ್ದಾರೆ.
ಬಳ್ಳೂರು ಬಸ್ ತಂಗುದಾಣ ಇದ್ದರೂ ಇಲ್ಲದಂತಾಗಿದೆ. ಈ ನಿಲ್ದಾಣ ಗಿಡ ಗಂಟಿಗಳಿಂದ ತುಂಬಿ ಹೋಗಿವೆ. ಹಾವುಗಳ ಕಾಟ ಸಹ ಇದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಬೇಕು.ನಾಗರಾಜು, ಸ್ಥಳೀಯ ನಿವಾಸಿ
ಬಸ್ ತಂಗುದಾಣಗಳಲ್ಲಿ ಸ್ಟಿಕರ್‌ಗಳನ್ನು ಅಂಟಿಸುವ ಜಾಗವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಬೇಕುಗುರುಮೂರ್ತಿ, ಸೋಲೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.