ಆನೇಕಲ್: ಗಿಡಗೆಂಟಿಗಳು ಬೆಳೆದು ಕಾಲಿಡಲು ಭಯ ಹುಟ್ಟಿಸುವಂತಿರುವ ಜಾಗ... ನಿರ್ವಹಣೆ ಕೊರತೆಯಿಂದ ಎಲ್ಲೆಡೆ ಗಲೀಜು ತಾಂಡವವಾಡುತ್ತಿದೆ. ಜನರ ಓಡಾಡವು ಇಲ್ಲದೆ ಬಿಕೋ ಎನ್ನುತ್ತಿದೆ...
–ಇದು ತಾಲ್ಲೂಕಿನ ಕಮ್ಮಸಂದ್ರ ಅಗ್ರಹಾರ ಬಸ್ ನಿಲ್ದಾಣ ಹಾಗೂ ಹಾಲ್ದೇನಹಳ್ಳಿಯ ಬೃಂದಾವನ ಗೇಟ್‌ನಲ್ಲಿರುವ ಬಸ್‌ನಿಲ್ದಾಣದ ದುಸ್ಥಿತಿ. ಈ ಪರಿಸ್ಥಿತಿ ಇವೆರಡು ಊರಿನದ್ದ ಅಲ್ಲ. ತಾಲ್ಲೂಕಿನ ಬಹುತೇಕ ಗ್ರಾಮಗಳ ಬಸ್ ನಿಲ್ದಾಣಗಳ ಸ್ಥಿತಿಯೂ ಹೌದು.
ಗ್ರಾಮೀಣ ಭಾಗದ ಬಸ್ ಶೆಲ್ಟರ್‌ಗಳು ಯಾರಿಗೂ ಬೇಡವಾಗಿದೆ. ಆಯಾಯ ಸ್ಥಳೀಯ ಆಡಳಿತಗಳು ನಿರ್ವಹಣೆ ಮಾಡದೆ ಹಾಳು ಕೊಂಪೆಯಾಗಿದೆ. ಇದರಿಂದ ಸಾರ್ವಜನಿಕರಿಗೂ ಈ ನಿಲ್ದಾಣಗಳಿಂದ ದೂರ ಉಳಿದಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಾಲ್ಲೂಕಿನ ಶೆಟ್ಟಿಹಳ್ಳಿಯವರು. ನಿಲ್ದಾಣ ಇಲ್ಲದ ಗ್ರಾಮೀಣ ಭಾಗಗಳಲ್ಲಿ ಬಸ್ ನಿಲ್ದಾಣ ಮತ್ತು ಅದಕ್ಕೆ ಬೇಕಾದ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಅವುಗಳ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಗಿಡಗೆಂಟಿಗಳು ಬೆಳೆದಿದ್ದು, ಅತ್ತ ಹೆಜ್ಜೆ ಇಡಲು ಭಯ ಪಡುವಂತಾಗಿದೆ. ತಾಲ್ಲೂಕಿನ ಹಳ್ಳಿಗಳ ಬಸ್ ನಿಲ್ದಾಣವನ್ನು ನೋಡಿದವರು ಇದು ಬಸ್ ನಿಲ್ದಾಣವೇ... ಅಥವಾ ಕಾಡೇ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ.
ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಆನೇಕಲ್-ಚಂದಾಪುರ, ಆನೇಕಲ್-ಅತ್ತಿಬೆಲೆ, ಆನೇಕಲ್-ಜಿಗಣಿ ರಸ್ತೆಗಳಲ್ಲಿರುವ ಬಸ್ ನಿಲ್ದಾಣಗಳು ಬಿತ್ತಿಪತ್ರ ಅಂಟಿಸಲು ಮಾತ್ರ ಬಳಕೆ ಆಗುತ್ತಿವೆ.
ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ನೀಡಲು ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ ಈ ನಿಲ್ದಾಣಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ. ಇದರಿಂದ ಬಳಕೆಯ ಯೋಗ್ಯತೆ ಕಳೆದುಕೊಂಡಿದೆ. ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ನಿಂತು ಪ್ರಯಾಣಿಕರು ಬಿಸಿಲು, ಗಾಳಿ–ಮಳೆ ಎನ್ನದೆ ಬಸ್‌ಗಾಗಿ ಕಾಯುತ್ತಿದ್ದಾರೆ. ಬಸ್ ನಿಲ್ದಾಣ ಇದ್ದು, ಇಲ್ಲದಂತಾಗಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ನಿಲ್ದಾಣಗಳು ನಿರ್ವಹಣೆ ಇಲ್ಲದೆ ಉಪಯೋಗಕ್ಕೆ ಬಾರದಂತಾಗಿದೆ. ಬ್ಯಾಗಡದೇನಹಳ್ಳಿ, ಕರ್ಪೂರು, ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸ್ ನಿಲ್ದಾಣಗಳ ಸ್ಥಿತಿ ಹೇಳತೀರದಾಗಿದೆ.
ತಾಲೂಕಿನ ಅತ್ತಿಬೆಲೆ ರಸ್ತೆಯಲ್ಲಿರುವ ಹಾಲ್ದೇನಳ್ಳಿ ಸಮೀಪದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಅವರ ಅನುದಾನದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದಿವೆ. ಇದರಿಂದ ಬಸ್ ನಿಲ್ದಾಣ ತನ್ನ ಸ್ವರೂಪ ಕಳೆದುಕೊಂಡಿದೆ. ಬಸ್ ನಿಲ್ದಾಣದ ಸುತ್ತಲೂ ಪಾರ್ಥೇನಿಯಂ ಗಿಡಗಳು ಬೆಳೆದಿದ್ದು, ಕಾಲಿಡಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ನಿಲ್ದಾಣವನ್ನು ಯಾವ ಪುರುಷಾರ್ಥಕ್ಕಾಗಿ ನಿರ್ಮಿಸಿದ್ದಾರೆ ಎಂದು ಸಾರ್ವಜಿಕರು ಅಸಮಾಧನಿತ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.
ಹಾಲ್ದೇನಹಳ್ಳಿ ಸಮೀಪದ ಬೃಂದಾವನ ಗಾರ್ಡೆನ್ ಸಮೀಪದ ಬಸ್ ನಿಲ್ದಾಣ ಯಾವುದೇ ಪೊದೆ ನಡುವೆ ಇದ್ದಂತೆ ಇದೆ. ಬಸ್ ನಿಲ್ದಾಣದ ಸುತ್ತಲೂ ಗಿಡಗಳು ಬೆಳೆದಿದ್ದು, ಬಸ್ ನಿಲ್ದಾಣಕ್ಕೆ ತೆರಳಲು ಸಹ ಸೂಕ್ತ ಜಾಗವಿಲ್ಲದಂತಾಗಿದೆ.
ಚಂದಾಪುರ ರಸ್ತೆಯ ಪ್ರಮುಖ ಬಸ್ ನಿಲ್ದಾಣವಾಗಿರುವ ಮರಸೂರು ಬಸ್ ನಿಲ್ದಾಣದ ಸುತ್ತಲೂ ಮಳೆಯ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಬಸ್ ನಿಲ್ದಾಣಕ್ಕೆ ಹೋಗಲು ಸಹ ದಾರಿಯೂ ಇಲ್ಲ. ಮರಸೂರು ಬಸ್ ನಿಲ್ದಾಣ ಇದರಿಂದ ಹೊರತಾಗಿಲ್ಲ. ನಿಲ್ದಾಣ ಮುಂದೆ ಕಳೆ ಬೆಳೆದಿದ್ದು, ಕೊಳಚೆ ನೀರು ಶೇಖರಣೆಯಾಗಿ ದುರ್ನಾತ ಬೀರುತ್ತಿದೆ.
ಚಂದಾಪುರ ರಸ್ತೆಯಲ್ಲಿರುವ ಆರ್.ಕೆ.ಫಾರ್ಮ್ ಬಸ್ ನಿಲ್ದಾಣ, ಕಮ್ಮಸಂದ್ರ ಅಗ್ರಹಾರ ಬಸ್ ನಿಲ್ದಾಣ, ಕರ್ಪೂರ ಗೇಟ್ ಬಸ್ ನಿಲ್ದಾಣ, ನಾಗನಾಯಕನಹಳ್ಳಿ ಬಸ್ ನಿಲ್ದಾಣದಲ್ಲಿ ಗಿಡಗೆಂಟಿ ಬೆಳೆದಿದ್ದು, ಇದು ಬಸ್ ನಿಲ್ದಾಣ ಎಂದು ನಾಮಫಲಕದಿಂದ ಮಾತ್ರ ಗುರುತಿಸಬಹುದಾಗಿದೆ. 2016-17ನೇ ಸಾಲಿನಲ್ಲಿ ನಿರ್ಮಿಸಿರುವ ನಾಗನಾಯಕನಹಳ್ಳಿ ಬಸ್ ನಿಲ್ದಾಣದ್ದು ಇದೇ ಸ್ಥಿತಿ.
ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರೆ ಮಳೆ ಬಿದ್ದಾಗ ಉಪಯೋಗಕ್ಕೆ ಬರುತ್ತವೆ. ತಾಲ್ಲೂಕಿನ ಬಸ್ ನಿಲ್ದಾಣಗಳಿಂದ ಏನು ಪ್ರಯೋಜನೆ ಇಲ್ಲ– ಪವನ್, ಚಂದಾಪುರ ನಿವಾಸಿ
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ
ತಾಲ್ಲೂಕಿನ ಚಂದಾಪುರ ರಸ್ತೆಯಲ್ಲಿರುವ ಹಲವು ಬಸ್ ನಿಲ್ದಾಣಗಳನ್ನು ವಿಶೇಷ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕಾದದ್ದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಆದರೆ ಸ್ಥಳೀಯ ಆಡಳಿತ ಸಂಸ್ಥೆ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿವೆ. ವಾಹನ ನಿಲುಗಡೆ ಸ್ಥಳವಾದ ಶೆಲ್ಟರ್ ಚಂದಾಪುರ ರಸ್ತೆಯಲ್ಲಿ ಹಲವು ಬಸ್ ನಿಲ್ದಾಣಗಳು ವಾಹನ ನಿಲುಗಡೆಯ ತಾಣಗಳಾಗಿವೆ. ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಕರ್ಪೂರು ಗೇಟ್ ಬ್ಯಾಗಡದೇನಹಳ್ಳಿ ಬಸ್ ನಿಲ್ದಾಣದಲ್ಲಿ ಪ್ರತಿ ದಿನ ಎರಡು ಮೂರು ದ್ವಿಚಕ್ರ ವಾಹನಗಳು ನಿಂತಿರುತ್ತವೆ. ಬ್ಯಾಗಡದೇನಹಳ್ಳಿ ಬಸ್ ನಿಲ್ದಾಣದಲ್ಲಿ ತಳ್ಳುಗಾಡಿಯ ಅಂಗಡಿಯನ್ನೇ ಇಟ್ಟುಕೊಂಡು ಪಾನಿಪುರಿ ಮಾರಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣಗಳು ತಮ್ಮ ಅಸ್ವಿತ್ವವನ್ನೇ ಕಳೆದುಕೊಳ್ಳಲಿವೆ. ಪೋಸ್ಟರ್ ಅಂಟಿಸುವ ಜಾಗ ಹಲವು ಬಸ್ ನಿಲ್ದಾಣಗಳು ಕೇವಲ ಪೋಸ್ಟರ್ ಅಂಟಿಸಲು ಮಾತ್ರ ಬಳಕೆಯಾಗುತ್ತಿದೆ. ಸುಸಜ್ಜಿತ ಸೌಲಭ್ಯಗಳ ಕೊರತೆ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಬಸ್ ನಿಲ್ದಾಣಗಳು ಸಾರ್ವಜನಿಕರು ಬಳಸುತ್ತಿಲ್ಲ. ರಸ್ತೆಗಳಲ್ಲಿಯೇ ಬಸ್‌ಗಾಗಿ ಕಾದು ತೆರಳುತ್ತಿದ್ದಾರೆ.
ರಸ್ತೆಯಲ್ಲೇ ನಿಂತು ಬಸ್ ಕಾಯಬೇಕು
ಚಂದಾಪುರ ರಸ್ತೆಯಲ್ಲಿರುವ ಹಲವು ಬಸ್ ನಿಲ್ದಾಣಗಳು ಸೂಕ್ತ ನಿರ್ವಹಣೆ ಇಲ್ಲದೇ ಗಿಡ ಗಂಟಿಗಳು ಬೆಳೆದಿವೆ. ಬಸ್ ನಿಲ್ದಾಣಗಳಲ್ಲಿದೇ ಸಾರ್ವಜನಿಕರು ರಸ್ತೆಯಲ್ಲಿಯೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಈ ಬಗ್ಗೆ ಸ್ಥಳೀಯ ಪಂಚಾಯಿತಿ ಕ್ರಮ ವಹಿಸಿ ಬಸ್ ನಿಲ್ದಾಣಗಳು ಸ್ವಚ್ಛಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಮಧುಕುಮಾರ್ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.