
ಆನೇಕಲ್: ರಸ್ತೆ ಬದಿ ಕಸ ಸುರಿವ ನಾಗರಿಕರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪುರಸಭೆಯ ಸಿಬ್ಬಂದಿ ಸ್ಥಳದಲ್ಲಿಯೇ ಅವರಿಗೆ ಹಾರ, ಶಾಲು ಹಾಕಿ ಸನ್ಮಾನಿಸಿದರು. ಬಳಿಕ ರಸ್ತೆ ಬದಿ ಸುರಿದ ಕಸವನ್ನು ಅವರಿಂದಲೇ ಎತ್ತಿಸಿ ಹಾಕಿಸಲಾಯಿತು.
ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಕಸ ಎಸೆಯುವವರನ್ನು ಸನ್ಮಾನಿಸುವ ವಿನೂತನ ಜಾಗೃತಿ ಕಾರ್ಯಕ್ರಮ ನಡೆಸಿದರು.
ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಪುರಸಭೆಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕಸ ವಿಂಗಡನೆಗಾಗಿ ಪ್ರಮುಖ ರಸ್ತೆಗಳಲ್ಲಿ ಕಬ್ಬಿಣದ ಬಾಕ್ಸ್ ಅಳವಡಿಸಲಾಗಿದೆ. ಕಸ ಸುರಿಯಬಾರದು ಎಂಬ ಫಲಕ ಹಾಕಲಾಗಿದೆ.
ಆದರೂ ಸಹ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿದ್ದರಿಂದ ಪುರಸಭೆಯ ಸಿಬ್ಬಂದಿಯು ರಸ್ತೆ ಬದಿಯಲ್ಲಿ ಕಸ ಸುರಿಯುವವರಿಗೆ ಸನ್ಮಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ಕಸ ಸುರಿಯುವವರ ಚಿತ್ರಗಳನ್ನು ಮಾಹಿತಿ ಫಲಕಗಳನ್ನಾಗಿ ಮಾಡಿ ಟೌನ್ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಹಾಕಲಾಗುವುದು ಎಂದು ಪುರಸಭೆಯ ಸಿಬ್ಬಂದಿ ತಿಳಿಸಿದರು.
ಆನೇಕಲ್ ಪುರಸಭೆಯ 27 ವಾರ್ಡ್‌ಗಳಿಗೂ ಪ್ರತಿದಿನ ಕಸ ಸಂಗ್ರಹಣಾ ವಾಹನ ಸಂಚರಿಸುತ್ತವೆ. ಹಸಿ ಕಸ ಮತ್ತು ಒಣ ಕಸದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸ್ವಚ್ಛತೆ ಕಾಪಾಡುವಂತೆ ಹಲವಾರು ಬಾರಿ ಸೂಚನೆ ನೀಡಲಾಗಿತ್ತು. ಅಲ್ಲಲ್ಲಿ ಬ್ಯಾನರ್ ಹಾಕಿಸಿ ಕಸ ಸುರಿಯಬಾರದು ಎಂದು ಸೂಚಿಸಲಾಗಿತ್ತು. ಆದರೂ ಮುಖ್ಯ ರಸ್ತೆಗಳಲ್ಲಿಯೇ ಕಸ ಹಾಕುತ್ತಿದ್ದಂತೆ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸನ್ಮಾನ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆಎಂದು ಪುರಸಭಾ ಮುಖ್ಯಾಧಿಕಾರಿ ಎಚ್.ಎ.ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಸುರಿಯುವವರಿಗೆ ₹500 ದಂಡ ವಿಧಿಸಲಾಗುವುದು. ಕಸದ ಹಾಟ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗುವುದು. ಕಸ ಸುರಿದವರ ಮನೆಯ ಮುಂದೆಯೇ ಕಸ ಸುರಿಯಲಾಗುವುದು.– ಎಚ್.ಎ.ಕುಮಾರ್, ಪುರಸಭಾ ಮುಖ್ಯಾಧಿಕಾರಿ
ರಸ್ತೆ ಬದಿಗಳಲ್ಲಿಯೇ ಕಸ ಹಾಕುತ್ತಿರುವುದರಿಂದ ಪುರಸಭೆಯು ಸನ್ಮಾನದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ನಾಚಿಕೆಯಾಗಬೇಕು.– ಕೃಷ್ಣ, ಆನೇಕಲ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.