ಆನೇಕಲ್: ತಾಲ್ಲೂಕಿನ ಜಿಗಣಿ ಲಿಂಕ್ ರಸ್ತೆಯ ಬಯೋಕಾನ್ ಪಾರ್ಕ್‌ನಲ್ಲಿ ಶನಿವಾರ ನಡೆದ ತಾಲೂಕು ಶಿಕ್ಷಣ ಶೃಂಗಸಭೆಯಲ್ಲಿ 2030ರ ವೇಳೆಗೆ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹೈಟೆಕ್ ಸ್ಪರ್ಶ ನೀಡುವ ನಿರ್ಣಯ ಅಂಗೀಕರಿಸಲಾಯಿತು.
ಬಯೋಕಾನ್ ಫೌಂಡೇಷನ್, ಇನ್ವಾಲ್ವ್ ಲರ್ನಿಂಗ್ ಸೊಲ್ಯೂಷನ್ ಫೌಂಡೇಷನ್ ಶಿಕ್ಷಣ ಶೃಂಗ ಸಭೆ ಆಯೋಜಿಸಿತ್ತು. ವಿವಿಧ ಕಂಪನಿಗಳ ಸಿಎಸ್‌ಆರ್ ಮುಖ್ಯಸ್ಥರು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ವಹಿಸಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಿದರು.
2030ರೊಳಗೆ ಆನೇಕಲ್ ತಾಲೂಕಿನ ಪ್ರತಿ ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣದ ಜೊತೆಗೆ ಗ್ರಂಥಾಲಯ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಸೌಲಭ್ಯ ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಪ್ರಸ್ತುತ ಜಾಯಮಾನಕ್ಕೆ ಶಿಕ್ಷಣ ಸಬಲೀಕರಣ ಅಗತ್ಯವಾಗಿ ಆಗಬೇಕಿದೆ. ಶಿಕ್ಷಣದಲ್ಲಿ ನಾವೀನ್ಯತೆ ಮೂಡಿಸಲು ಮತ್ತು ಪ್ರಾಥಮಿಕ ಶಿಕ್ಷಣವನ್ನು ಬಲಗೊಳಿಸಲು ಅವಶ್ಯಕ ಇರುವ ಕಾರ್ಯಕ್ರಮ ರೂಪಿಸುವ ಅವಶ್ಯಕತೆಯಿದೆ. ಭವಿಷ್ಯದ ಶಿಕ್ಷಣವನ್ನು ಗಟ್ಟಿಗೊಳಿಸಲು ಶೃಂಗಸಭೆ ಆಯೋಜಿಸಲಾಗಿದೆ ಎಂದರು.
ಇನ್ವಾಲ್ವ್ ಲರ್ನಿಂಗ್ ಸೊಲ್ಯೂಷನ್ ಪೌಂಡೇಷನ್‌ನ ಸಮ್ಯಕ್ ಜೈನ್, ಪ್ರತಿಯೊಂದು ಮಗುವಿಗೂ ಶಿಕ್ಷಣ ದೃಷ್ಟಿಕೋನವನ್ನು ತಿಳಿಸಬೇಕಾದುದ್ದು ಪೋಷಕರ ಜವಾಬ್ದಾರಿ. ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರು, ಸರ್ಕಾರಿ ಮತ್ತು ಕಂಪನಿಗಳ ಪಾಲುದಾರಿಗೆ ಅವಶ್ಯಕವಾಗಿದೆ. ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಸಂಶೋಧನೆಗಳತ್ತ ಗಮನ ಹರಿಸಲು ಶಿಕ್ಷಕರು ಕ್ರಮ ವಹಿಸಬೇಕು. ದೈನಂದಿನ ಕಲಿಕೆಯ ಸವಾಲುಗಳಿಗೆ ಸೃಜನಶೀಲ ಪರಿಹಾರವನ್ನು ಒದಗಿಸಲು ಕಂಪನಿಗಳ ಅವಶ್ಯಕತೆಯಿದೆ ಎಂದರು.
ಆನೇಕಲ್ ತಾಲ್ಲೂಕು ಗ್ರಾಮೀಣ ಪ್ರದೇಶದಲ್ಲಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೂಲಸೌಲಭ್ಯಗಳನ್ನು ಸುಧಾರಿಸಲು ತ್ವರಿತ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ ಹೇಳಿದರು.
ಸನ್‌ಸೇರಾ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ, ಬಯೋಕಾನ್ ಫೌಂಡೇಷನ್‌ನ ನಿರ್ದೇಶಕಿ ಅನುಪಮ ಶೆಟ್ಟಿ, ಕೀ ಎಜುಕೇಷನ್ ಫೌಂಡೇಷನ್‌ನ ಶ್ವೇತಾ ಗುಹಾನ್, ಭಾಷ್ ಕಂಪನಿಯ ಪುಂಡಲೀಕಾ ಕಾಮತ್, ಇ ವಿದ್ಯಾ ಲೋಕ ಮುಖ್ಯಸ್ಥೆ ಬೃಂದಾ ಪೂರ್ಣಪ್ರಜ್ಞ, ವೋಲ್ವೋ ಕಂಪನಿಯ ಜಿ.ವಿ.ರಾವ್, ಇನ್ವಾಲ್ವ್ ಲರ್ನಿಂಗ್ ಸೊಲ್ಯೂಷನ್ ಫೌಂಡೇಷನ್‌ನ ಪ್ರತಿಭಾ ನಾರಾಯಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.