ADVERTISEMENT

ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ಎಂಟು ಕೊಲೆ!

ಬಹುತೇಕ ಕೊಲೆ ಪ್ರಕರಣಗಳಿಗೆ ವೈಯಕ್ತಿಕ ವಿಚಾರವೇ ಕಾರಣ: ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 2:51 IST
Last Updated 4 ಡಿಸೆಂಬರ್ 2025, 2:51 IST
   

ಆನೇಕಲ್: ಕಳೆದ ಒಂದು ತಿಂಗಳಲ್ಲಿ ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಂಟು ಕೊಲೆ ಪ್ರಕರಣಗಳು ವರದಿಯಾಗಿವೆ. ನವೆಂಬರ್‌ನಲ್ಲಿ ನಡೆದ ಕೊಲೆಗಳಿಗೆ ವೈಯಕ್ತಿಕ ವಿಚಾರವೇ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಹೆಬ್ಬಗೋಡಿ, ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿವೆ.

ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಗ್ರಾಮದ ಶ್ರೀನಾಥ್ ಎಂಬ ಐಟಿ ಉದ್ಯೋಗಿಯನ್ನು ಸಿನಿಮೀಯ ರೀತಿಯಲ್ಲಿ ಕುಪ್ಪಂನಲ್ಲಿ ಕೊಲೆ ಮಾಡಲಾಗಿತ್ತು. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಮಿಳುನಾಡು ಮೂಲದ ಬಲರಾಮನ್ ಅವರ ಕೊಲೆಯಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ನೀಡಿದ ಇಂಜೆಕ್ಷನ್‌ನಿಂದಾಗಿ ಪತ್ನಿ ವಿದ್ಯಾ ಮೃತಪಟ್ಟಿದ್ದರು. ನವೆಂಬರ್ ಒಂದೇ ತಿಂಗಳಿನಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೊಲೆ ಪ್ರಕರಣಗಳು ದಾಖಲಾಗಿವೆ.

ADVERTISEMENT

ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದೇಶ ಮತ್ತು ಬಾಲಪ್ಪರೆಡ್ಡಿ ಎಂಬುವರನ್ನು ರವಿಪ್ರಸಾದ್ ರೆಡ್ಡಿ ಹತ್ಯೆ ಮಾಡಿದ್ದ ಎಂಬ ಆರೋಪವಿದೆ. ವೇಗವಾಗಿ ಹಣ ಗಳಿಸುವ ಉದ್ದೇಶದಿಂದ ಬಾಲಪ್ಪರೆಡ್ಡಿ ಮತ್ತು ಮಾದೇಶ ಎಂಬುವರನ್ನು ರವಿಪ್ರಸಾದ್ ರೆಡ್ಡಿ ಅಪಹರಣ ಮಾಡಿರುತ್ತಾನೆ. ಆ ಬಳಿಕ ಅವರಿಂದ ಹಣ ಪಡೆದು ಬಿಟ್ಟಿರುತ್ತಾನೆ. ಆದರೆ, ಅವರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂಬ ಭೀತಿಯಿಂದ ಆ ಇಬ್ಬರನ್ನು ರವಿಪ್ರಸಾದ್ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ. 

ಚಿನ್ನದಾಸೆಗಾಗಿ ವೃದ್ಧೆ ಕೊಲೆ: ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧೆಯ ಮೈ ಮೇಲೆ ಇದ್ದ ಚಿನ್ನಾಭರಣ ಕದಿಯಲು ಕಜ್ಜಾಯ ಕೊಡುವ ಸೋಗಿನಲ್ಲಿ ವೃದ್ಧೆ ಭದ್ರಮ್ಮ ಅವರನ್ನು ದೀಪ ಎಂಬುವರು ಕರೆಸಿಕೊಂಡು ಕೊಲೆ ಮಾಡಿದ್ದರು. ತನ್ನ ಪತ್ನಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯ ಪತಿ, ತನ್ನ ಹೆಂಡತಿಯ ಪ್ರಿಯಕರ ಎನ್ನಲಾದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಘಟನೆಯೂ ವರದಿಯಾಗಿತ್ತು. 

ಕುಡಿದು ಗಲಾಟೆ ಮಾಡುತ್ತಾನೆ, ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಣ್ಣನೇ ತನ್ನ ಒಡಹುಟ್ಟಿದ ತಮ್ಮನ್ನನ್ನು ಕೊಲೆ ಮಾಡಿದ್ದ ಘಟನೆಯೂ ನಡೆದಿದೆ.
ಬನ್ನೇರುಘಟ್ಟ ಪೊಲೀಸರು ವಾರದ ಬಳಿಕ ಈ ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದರು.

ಈ ಎಲ್ಲ ಎಂಟು ಪ್ರಕರಣಗಳು ವೈಯಕ್ತಿಕ ಕಾರಣಗಳಿಗಾಗಿಯೇ ನಡೆದಿವೆ. ಗಂಡ, ಹೆಂಡತಿ ಜಗಳ, ಬಾರ್‌ನಲ್ಲಿ ಗಲಾಟೆ, ಅಣ್ಣ, ತಮ್ಮನ ಜಗಳ ಸೇರಿದಂತೆ ವಿವಿಧ ವೈಯಕ್ತಿಕ ಕಾರಣಗಳು ಕೊಲೆಯಲ್ಲಿ ಅಂತ್ಯವಾಗಿವೆ. ಆನೇಕಲ್‌ ತಾಲ್ಲೂಕಿನಲ್ಲಿ ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ರೌಡಿಗಳ ಕಾಲಿಗೆ ಗುಂಡೇಟು ಹೊಡೆಯಲಾಗಿದೆ ಎಂದು ಡಿವೈಎಸ್‌ಪಿ ಮೋಹನ್‌ ಕುಮಾರ್‌ ತಿಳಿಸಿದ್ದಾರೆ.

ನಗರೀಕರಣದ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ವೇಗವಾಗಿ ಶ್ರೀಮಂತರಾಗಬೇಕು, ಅನೈತಿಕ ಸಂಬಂಧ, ಕೌಟುಂಬಿಕ ಕಲಹ, ಹೆಚ್ಚುತ್ತಿರುವ ಬಾರ್‌ಗಳು ಅಪರಾಧ ಚಟುವಟಿಕೆಗಳಿಗೆ ಪ್ರಮುಖ ಕಾರಣವಾಗಿವೆ ಎನ್ನುತ್ತಾರೆ ಸಮಾಜ ಚಿಂತಕರು.

ಆನೇಕಲ್‌ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಯುವ ಸಮುದಾಯ ದುಶ್ಚಟಗಳಿಗೆ ದಾಸರಾಗುತ್ತಿರುವುದು ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ

–ಪುರುಷೋತ್ತಮ್‌ ಆನೇಕಲ್‌ ವಕೀಲ

ಅಪರಾಧ ಚಟುವಟಿಕೆ ನಿಗ್ರಹಕ್ಕೆ ಕ್ರಮ

ಆನೇಕಲ್ ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ಕೊಲೆ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ಎಲ್ಲ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಒಂದೇ ತಿಂಗಳಲ್ಲಿ ಇಷ್ಟು ಕೊಲೆಗಳು ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೋಲಿಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ.

–ಮೋಹನ್‌ ಕುಮಾರ್ ಡಿವೈಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.