ADVERTISEMENT

ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಸ್ಥಾಪಿಸಿ: ಕಾರ್ಮಿಕ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:10 IST
Last Updated 24 ನವೆಂಬರ್ 2025, 2:10 IST
ಆನೇಕಲ್‌ನಲ್ಲಿ ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟ ಸಂಘದಿಂದ ಆಯೋಜಿಸಿದ್ದ ಕನ್ನಡಿಗರ ಹಬ್ಬದ ಮೆರವಣಿಗೆಯಲ್ಲಿ ಕಲಾತಂಡಗಳು
ಆನೇಕಲ್‌ನಲ್ಲಿ ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟ ಸಂಘದಿಂದ ಆಯೋಜಿಸಿದ್ದ ಕನ್ನಡಿಗರ ಹಬ್ಬದ ಮೆರವಣಿಗೆಯಲ್ಲಿ ಕಲಾತಂಡಗಳು   

ಆನೇಕಲ್: ಪಟ್ಟಣದಲ್ಲಿ ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟ ಸಂಘದಿಂದ ರಾಜ್ಯೋತ್ಸವದ ಪ್ರಯುಕ್ತ ಕನ್ನಡಿಗರ ಹಬ್ಬ ಸಂಭ್ರಮ ನಡೆಯಿತು. 

ಹಬ್ಬದ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವೀರಗಾಸೆ, ತಮಟೆ, ಗಾರುಡಿ ಗೊಂಬೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿತು.

ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕನ್ನಡಾಂಬೆ ಮಂಜು ಮಾತನಾಡಿ, ಆನೇಕಲ್‌ ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಕನ್ನಡ ಕೇಂದ್ರ ಅಗತ್ಯವಿದೆ. ಈ ಭಾಗದಲ್ಲಿ ಬ್ಯಾಂಕ್‌ಗಳಲ್ಲಿಯೂ ಅನ್ಯಭಾಷಿಕರೇ ಹೆಚ್ಚಾಗಿದ್ದಾರೆ. ಇದರಿಂದಾಗಿ ಕನ್ನಡಿಗರಿಗೆ ಸುಗಮವಾಗಿ ವ್ಯವಹಾರ ಮಾಡಲಾಗುತ್ತಿಲ್ಲ. ಹಾಗಾಗಿ ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಸರ್ಕಾರ ಕೈಗಾರಿಕ ಪ್ರದೇಶಗಳಲ್ಲಿ ಕನ್ನಡ ಕಲಿಕ ಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಕನ್ನಡಿಗರ ಹಬ್ಬ ಕಾರ್ಯಕ್ರಮದ ಪ್ರಯುಕ್ತ ಸರ್ಕಾರಿ ಶಾಲೆಯ 50 ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ, ಆಶಾ ಕಾರ್ಯಕರ್ತರಿಗೆ ಉಪಯುಕ್ತವಾಗುವಂತೆ ಬ್ಯಾಗ್‌, ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್‌, ಶೂ, ಅಂಗವಿಕಲರಿಗೆ ಪರಿಕರಗಳು ಮತ್ತು ವೃದ್ಧರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಆಚರಿಸಲಾಗಿದೆ ಎಂದರು.

ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿದರು. ಮುಖಂಡರಾದ ಬಾಬು, ಕೃಷ್ಣಪ್ಪ, ರೇಣುಕಾ, ಸಂಘಟನೆಯ ನಾರಾಯಣ ಕುಮಾರ್, ಯಲ್ಲಪ್ಪ, ಶ್ರೀನಿವಾಸ್‌, ನಾರಾಯಣ್‌, ರಾಧ.ಆರ್‌.ಬೈಲಪ್ಪ, ಕೀರ್ತನಾ ಮಂಜು, ಸುನೀತಾ ಬಾಯಿ, ಭರತ್‌ ಕುಮಾರ್, ರವಿಚಂದ್ರ, ಪಿ.ಎನ್‌. ಆನಂದ್‌ ಇದ್ದರು.

ಕನ್ನಡಿಗರ ಹಬ್ಬದ ಪ್ರಯುಕ್ತ ಭುವನೇಶ್ವರಿ ದೇವಿ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.