ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಕ್ಯಾಂಪ್ ಸೀಗೆಕಟ್ಟೆ ಬಳಿ ಬುಧವಾರ ಕೆರೆಯಲ್ಲಿ ಆನೆ ಸ್ನಾನ ಮಾಡಿಸುತ್ತಿದ್ದ ಕಾವಾಡಿಯೊಬ್ಬರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನ ಗೋಪಾಲ್ (20) ಮೃತ ಕಾವಾಡಿ. ಗೋಪಾಲ್ ಒಂದೂವರೆ ವರ್ಷದಿಂದ ಸಂಪತ್ ಎಂಬ 10 ವರ್ಷದ ಆನೆ ನೋಡಿಕೊಳ್ಳುತ್ತಿದ್ದರು.
ಮೈ ತೊಳೆಯಲು ಕೆರೆಗೆ ಕರೆದೊಯ್ದಿದ್ದ ಆನೆ ದಡದಿಂದ ಏಕಾಏಕಿ ಮಧ್ಯಕ್ಕೆ ಹೋಗಿದೆ. ಆನೆ ಮೇಲಿದ್ದ ಗೋಪಾಲ್ ನೀರಿಗೆ ಬಿದ್ದಿದ್ದಾರೆ. ಈಜು ಬಾರದೆ ನೀರಿನಲ್ಲಿ ಮುಳಗುತ್ತಿದ್ದನ್ನು ನೋಡಿದ ಆತನ ಅಣ್ಣ ಕೃಷ್ಣಕುಮಾರ್ ಮತ್ತು ಮಾವುತ ಸಂಜೇಶ್ ಇಬ್ಬರೂ ಸೇರಿ ಗೋಪಾಲ್‌ನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಗೋಪಾಲ್ ಕೆರೆಯಲ್ಲಿ ಮುಳುಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಪೊಲೀಸರು, ಈಜು ತಜ್ಞರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಗೋಪಾಲ್ ಮೃತದೇಹ ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
‘ಆಕಸ್ಮಿಕವಾಗಿ ಈ ಅವಘಡ ನಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಆನೆಗಳ ಸ್ನಾನ ಮತ್ತು ಮೈತೊಳೆಯಲು ತೊಟ್ಟಿ ನಿರ್ಮಿಸಲಾಗುವುದು’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.