ADVERTISEMENT

ಆನೇಕಲ್‌ ಪುರಸಭೆ ಅವಧಿ ಮುಕ್ತಾಯ: ನಗರಸಭೆಯಾಗಿ ಮೇಲ್ದರ್ಜೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:01 IST
Last Updated 14 ನವೆಂಬರ್ 2025, 2:01 IST
ಆನೇಕಲ್ ಪುರಸಭೆ
ಆನೇಕಲ್ ಪುರಸಭೆ   

ಆನೇಕಲ್: ಪಟ್ಟಣದ ಪುರಸಭೆಯ ಅವಧಿಯು ಮುಕ್ತಾಯವಾಗಿದ್ದು, ಮುಂಬರುವ ಚುನಾವಣೆ ವೇಳೆಗೆ ನಗರಸಭೆಯಾಗಿ ಮೇಲ್ದರ್ಜೆ ಅಥವಾ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಗೆ ಸೇರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಆನೇಕಲ್‌ ಪುರಸಭೆ ಹಳೆದಾಗಿದ್ದು, ಸ್ವಾತಂತ್ರ್ಯ ಪೂರ್ವದಿಂದ ಇತಿಹಾಸ ಇದೆ. 1946ರಲ್ಲಿ ಆರಂಭವಾಯಿತು. ರಾಜ್ಯ ರಾಜಧಾನಿಗೆ ಸಮೀಪ ಇದ್ದರೂ, ಅಂದಿನಿಂದಲೂ ಮೇಲ್ದರ್ಜೆಗೇರದೆ ಪುರಸಭೆಯಾಗಿಯೇ ಉಳಿದಿದೆ. 

ಅಭಿವೃದ್ಧಿ ಕೆಲಸಗಳು ಹೆಚ್ಚಾಗಿ, ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕೆಂಬ ಉದ್ದೇಶದಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ದಶಕಗಳ ಬೇಡಿಕೆ ಈಗಾಲಾದರೂ ಈಡೇರಬೇಕು. ನಗರಸಭೆ ಅಥವಾ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಯಾಗಬೇಕೆಂಬುದು ಸ್ಥಳೀಯರ ಒತ್ತಾಯ.

ADVERTISEMENT

ಆನೇಕಲ್‌ ಪುರಸಭೆಯು ಬೆಂಗಳೂರಿನ ಸೆರಗಿನಲ್ಲಿದ್ದು ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುರಸಭೆಯು ಮೇಲ್ದರ್ಜೆಗೇರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಸೌಲಭ್ಯಗಳು ದೊರೆಯುತ್ತದೆ. ಅನುದಾನ ಹೆಚ್ಚಾಗುತ್ತದೆ. ತಾಲ್ಲೂಕಿನ ಐದು ನಗರಸ್ಥಳೀಯ ಸಂಸ್ಥೆಗಳಿದ್ದು, 2016ರಲ್ಲಿ ಹೆಬ್ಬಗೋಡಿ, ಬೊಮ್ಮಸಂದ್ರ, ಅತ್ತಿಬೆಲೆ, ಜಿಗಣಿ ಗ್ರಾಮ ಪಂಚಾಯಿತಿಗಳು ನಗರಸಭೆ ಮತ್ತು ಪುರಸಭೆಯಾಗಿ ಮೇಲ್ದರ್ಜೇಗೇರಿತ್ತು. ಆದರೆ ಇದರಿಂದ ಆನೇಕಲ್‌ ಪುರಸಭೆ ವಂಚಿತವಾಗಿತ್ತು.

1946ರಿಂದ ಆನೇಕಲ್ ಪುರಸಭೆ ಅಧ್ಯಕ್ಷರಾಗಿರುವ ಪಟ್ಟಿ
ಜನಸಂಖ್ಯೆ ಹೆಚ್ಚಿದ್ದರೂ ಮತ್ತು ಕಳೆದ 79 ವರ್ಷಗಳಿಂದ ಆನೇಕಲ್ ಪುರಸಭೆಯಾಗಿ ಮೇಲ್ದರ್ಜೇಗೇರುವುದರಿಂದ ವಂಚಿತವಾಗಿತ್ತು. ಈ ಬಾರಿಯಾದರೂ ಆನೇಕಲ್‌ ಪುರಸಭೆ ಮೇಲ್ದರ್ಜೇಗೇರಿ ನಗರಸಭೆಯಾಗಬೇಕು
ಮಾದಯ್ಯ ,ಸ್ಥಳೀಯ
ಆನೇಕಲ್‌ ಪುರಸಭೆಗೆ ಹೊಂದಿಕೊಂಡಿರುವ ಸಮಂದೂರು ಕರ್ಪೂರು ಸುರಗಜಕ್ಕನಹಳ್ಳಿ ಮತ್ತು ವಣಕನಹಳ್ಳಿ ಗ್ರಾಮ ಪಂಚಾಯಿತಿಗಳ ಗ್ರಾಮಗಳನ್ನು ಸೇರಿಸಿಕೊಂಡು ಆನೇಕಲ್‌ ನಗರಸಭೆಯಾಗಬೇಕು.
ರಾಮಸ್ವಾಮಿ, ಸ್ಥಳೀಯ
ಸರ್ಕಾರಕ್ಕೆ ಪ್ರಸ್ತಾಪ
‘ಆನೇಕಲ್‌ ಪುರಸಭೆಯನ್ನು ಮೇಲ್ದರ್ಜೇಗೇರಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು.  ಆನೇಕಲ್‌ ತಾಲ್ಲೂಕುನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಬೇಕೆಂದೂ ಸರ್ಕಾರವನ್ನು ಕೋರಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳನ್ನು ನೋಡಿಕೊಂಡು ನಗರಸಭೆ ಮೇಲ್ದರ್ಜೆಗೆ ಪ್ರಸ್ತಾಪ ಸಲ್ಲಿಸಲಾಗುವುದು’ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.