ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಶ್ವನಾಥರೆಡ್ಡಿ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದು ತಮ್ಮ ರಾಜೀನಾಮೆ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಕಾಂತರಾಜು ಅವರಿಗೆ ನೀಡಿದರು.
ಬಳಿಕ ಮಾತನಾಡಿದ, ‘ವಿಶ್ವನಾಥರೆಡ್ಡಿ, ರೈತರು 77 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೆವೆ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಮುತ್ತಾನಲ್ಲೂರು ಮತ್ತು ಹಂದೇನಹಳ್ಳಿ ಗ್ರಾಮಗಳಲ್ಲಿ ರೈತರು ಹಗಲು ರಾತ್ರಿಯೆನ್ನೇ ಹೋರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ ಮನನೊಂದು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ತಿಳಿಸಿದರು.
ಹಲವು ಭಾರಿ ಹೋರಾಟಗಳನ್ನು ನಡೆಸಿದರೂ ಸರ್ಕಾರ ಸ್ಪಂದಿಸದಿರುವುದು ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಈ ಭಾಗದ ಭೂಮಿ ಕೃಷಿ ಭೂಮಿಯನ್ನು ಸರ್ವೇಗಳಲ್ಲಿ ಬರಡು ಭೂಮಿ ಎಂದು ತೋರಿಸಿರುವುದು ಖಂಡನೀಯ. ಸರ್ಜಾಪುರ ಭಾಗದ ರೈತರು ಕೃಷಿ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಇಂತಹ ಭೂಮಿಯನ್ನೇ ಕಿತ್ತುಕೊಂಡರೆ ರೈತರು ಬೀದಿ ಬರಬೇಕಾಗುತ್ತದೆ ಎಂದರು.
ಮುಖಂಡರಾದ ಚಿನ್ನಪ್ಪ ಚಿಕ್ಕಹಾಗಡೆ, ಗುರುಮೂರ್ತಿ ರೆಡ್ಡಿ, ರಾಜೇಶ್, ಸುನೀಲ್, ಮಂಜುನಾಥ ರೆಡ್ಡಿ, ಪವನ್, ಪ್ರತಾಪ್ ಸೇರಿದಂತೆ ರೈತ ಮುಖಂಡರೊಂದಿಗೆ ಗ್ರಾಮ ಪಂಚಾಯಿತಿಗೆ ತೆರಳಿ ವಿಶ್ವನಾಥರೆಡ್ಡಿ ರಾಜೀನಾಮೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.