ADVERTISEMENT

ಆನೇಕಲ್: 24 ದಿನ ಪೂರೈಸಿದ ರೈತರ ಹೋರಾಟ

ಸರ್ಜಾಪುರ ಭೂ ಸ್ವಾಧೀನ ವಿರೋಧಿ ಹೋರಾಟ । ಜಯ ಕರ್ನಾಟಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:27 IST
Last Updated 2 ಆಗಸ್ಟ್ 2025, 4:27 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿದರು
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿದರು   

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ 24 ದಿನ ಪೂರೈಸಿದ್ದು, ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.

ರಾಜ್ಯ ಸರ್ಕಾರ ಸರ್ಜಾಪುರ ಹೋಬಳಿಯಲ್ಲಿ ಸ್ವಿಫ್ಟ್ ಸಿಟಿ ಹೆಸರಿನಲ್ಲಿ ಕೈಗಾರಿಕೆ ನಿರ್ಮಿಸಲು ಪಣತೊಟ್ಟಿದೆ. ಕೈಗಾರಿಕೆಗಳ ನಿರ್ಮಾಣದಿಂದ ಹಣ ಸಂಪಾದಿಸಬಹುದೇ ಹೊರತು ಹಣ್ಣು, ತರಕಾರಿ ಮತ್ತು ದವಸ ಧಾನ್ಯ ಬೆಳೆಯಲು ಸಾಧ್ಯವಿಲ್ಲ. ಅನ್ನ ನೀಡುವವ ರೈತರಿಗೆ ತೊಂದರೆ ನೀಡದೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಭಾಕರ್ ರೆಡ್ಡಿ ಒತ್ತಾಯಿಸಿದರು.

ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡುವುದರಿಂದ ಮುಂದಿನ ದಿನಗಳಲ್ಲಿ ಪರಿಸರ ಸಮತೋಲನಕ್ಕೆ ಪೆಟ್ಟು ಬೀಳಲಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಡು ಭೂಮಿಗಳಿವೆ. ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈಜೋಡಿಸಬೇಕು. ಆದರೆ ರಾಜ್ಯ ಸರ್ಕಾರ ಕೃಷಿ ಭೂಮಿಗಳನ್ನು ಭೂಸ್ವಾಧೀನ ಮಾಡಲು ಹೊರಟಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.

ADVERTISEMENT

ನಾಲ್ಕೈದು ದಶಕಗಳಿಂದ ಆನೇಕಲ್ ಭಾಗದ ರೈತರ ಮೇಲೆ ಭೂಸ್ವಾಧೀನ ಅಸ್ತ್ರವನ್ನು ಸರ್ಕಾರ ಪ್ರಯೋಗಿಸುತ್ತಿದೆ. ತಾಲ್ಲೂಕಿನಲ್ಲಿ ಈಗಾಗಲೇ ಐದು ಕೈಗಾರಿಕಾ ಪ್ರದೇಶಗಳಿವೆ. ಹಾಗಾಗಿ ಸರ್ಜಾಪುರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ನಾಗನಾಯಕನಹಳ್ಳಿ ಅಂಬರೀಶ್ ಆಗ್ರಹಿಸಿದರು.

ಕರ್ನಾಟಕ ಜೈ ಭೀಮ್ ಜನಜಾಗೃತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಚಿಕ್ಕಹಾಗಡೆ, ಮುತ್ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ರೆಡ್ಡಿ, ಮುಖಂಡರಾದ ಕೃಷ್ಣಾರೆಡ್ಡಿ, ಕೇಶವ್, ನಾಗರಾಜ್ ರೆಡ್ಡಿ, ಗೋಪಾಲ್ ರೆಡ್ಡಿ, ಬಾಬು ಪ್ರಸಾದ್, ಗುರುಮೂರ್ತಿ, ಪ್ರತಾಪ್, ನಾಗೇಶ್, ಮಧುಸೂಧನ್, ಲೋಕೇಶ್, ಹರೀಶ್, ಪ್ರಸನ್ನ, ಸತೀಶ್ ಬಾಬು, ಕಿಶೋರ್, ರವಿಕುಮಾರ್, ಯಾಸ್ಮಿನ್‌ ತಾಜ್‌, ವಿನೋದ್, ನಂದೀಶ್, ಮಧು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.