ADVERTISEMENT

ಆನೇಕಲ್: ರಸ್ತೆ ಪಕ್ಕ ಹರಿಯುವ ‘ಹೊಲಸು ಹೊಳೆ’

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 1:44 IST
Last Updated 6 ಆಗಸ್ಟ್ 2025, 1:44 IST
<div class="paragraphs"><p>ಆನೇಕಲ್‌ ತಾಲ್ಲೂಕಿನ ಚಂದಾಪುರ ರಸ್ತೆಯ ರಾಮಕೃಷ್ಣಾಪುರ ಗೇಟ್‌ನಲ್ಲಿ ಕೊಳಚೆ ನೀರು</p></div>

ಆನೇಕಲ್‌ ತಾಲ್ಲೂಕಿನ ಚಂದಾಪುರ ರಸ್ತೆಯ ರಾಮಕೃಷ್ಣಾಪುರ ಗೇಟ್‌ನಲ್ಲಿ ಕೊಳಚೆ ನೀರು

   

ಆನೇಕಲ್: ತಾಲ್ಲೂಕಿನ ಚಂದಾಪುರ ಮುಖ್ಯ ರಸ್ತೆಯ ರಾಮಕೃಷ್ಣಾಪುರ ಗೇಟ್‌ನಲ್ಲಿರುವ ಚರಂಡಿ ಕಟ್ಟಿಕೊಂಡು ಕೊಳಚೆನೀರು ರಸ್ತೆ ಪಕ್ಕದಲ್ಲೇ ಹೊಳೆಯಂತೆ ಹರಿಯುತ್ತಿದೆ.

ಇದರಿಂದ ಹೊರಹೊಮ್ಮುವ ಗಬ್ಬುನಾತ ತಡೆಯಲಾಗದೆ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ತಿರುಗುತ್ತಿದ್ದಾರೆ.ಕೆಲವರು ಈ ರಸ್ತೆಯ ಸಹವಾಸ ಬಿಟ್ಟು ಬೇರೆ ರಸ್ತೆ ಹಿಡಿದಿದ್ದಾರೆ.

ADVERTISEMENT

ಚಂದಾಪುರ ಪುರಸಭೆ ಮತ್ತು ಮರಸೂರು ಗ್ರಾಮ ಪಂಚಾಯಿತಿಯ ಗಡಿಯಲ್ಲಿರುವ ರಾಮಕೃಷ್ಣಾಪುರ ಗೇಟ್‌ ಚರಂಡಿಯಲ್ಲಿ ವಾರದಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ರಸ್ತೆ ತುಂಬಾ ದುರ್ನಾತ ಹರಡಿದೆ. ಸೊಳ್ಳೆ ಕಾಟ ಕೂಡ ಹೆಚ್ಚಾಗಿದೆ.

ಹಲವು ದಿನಗಳಿಂದ ನಿಂತಲ್ಲೇ ನಿಂತ ನೀರು ಮಲಿತು ಹೋಗಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ. ಐದಾರು ದಿನ ಕಳೆದರೂ ಸ್ಥಳೀಯ ಸಂಸ್ಥೆ  ಯಾವುದೇ ಕ್ರಮ ಕೈಗೊಂಡಿಲ್ಲ. 

ಸ್ಥಳೀಯ ಸಂಸ್ಥೆಯ ಚರಂಡಿ ದುರಸ್ತಿ ಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಎಲ್ಲಿಂದ ಹರಿಯುತ್ತಿದೆ ಕೊಳಚೆ

ಚರಂಡಿ ಹೊಳೆಯಂತೆ ಹರಿಯುವುದಕ್ಕೆ ಕಾರಣವೆಂದು ಗೊತ್ತಿಲ್ಲ. ಮುಖ್ಯ ರಸ್ತೆ ಸಮೀಪ ಮನೆಗಳು ಸಹ ಕಡಿಮೆ ಇವೆ. ಹೆಚ್ಚು ಪ್ರಮಾಣದ ಕೊಳಚೆ ಚರಂಡಿಗೆ ಹರಿಯಲು ಕಾರಣವೇನು ಎಂಬುದನ್ನು ಸ್ಥಳೀಯ ಸಂಸ್ಥೆ ಹುಡುಕಬೇಕಾಗಿದೆ. ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರು ಅಥವಾ ಕೈಗಾರಿಕೆಗಳ ತ್ಯಾಜ್ಯ ನೀರು ಚರಂಡಿಗೆ ಹರಿಯುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಸಮಸ್ಯೆ ಉಂಟಾಗಿದೆ. ಸ್ಥಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದು
ಶಾರದ ವರದರಾಜು, ಅಧ್ಯಕ್ಷೆ, ಚಂದಾಪುರ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.