
ಆನೇಕಲ್: ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಸಮದಾಯದವರು ಗುರುವಾರ ಸಂಭ್ರಮದಿಂದ ಆಚರಿಸಿದರು. ಆನೇಕಲ್‌ನ ಸಂತ ಜೋಸೆಫ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿದರು. ಪುಟಾಣಿ ಮಕ್ಕಳು ಸಂಟಾಕ್ಲಾಸ್‌ನೊಂದಿಗೆ ಆಟವಾಡುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಆನೇಕಲ್‌ನ ಸಂತಜೋಸೆಫರ ಚರ್ಚ್ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಚರ್ಚ್‌ಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಯೇಸುಕ್ರಿಸ್ತನಿಗೆ ಮೇಣದ ದೀಪವನ್ನು ಹಚ್ಚಿದರು. ಆನೇಕಲ್‌ನ ಸಂತ ಜೋಸೆಫರ ಚರ್ಚ್ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಸುತ್ತಮುತ್ತಲಿನ ವಾರ್ಡ್‌ಗಳ ಜನರು ಮತ್ತು ವಿವಿಧ ಗ್ರಾಮಗಳ ಗ್ರಾಮಸ್ಥರು ಚರ್ಚ್‌ಗೆ ಭೇಟಿ ನೀಡಿ ಧರ್ಮಗುರುಗಳಿಂದ ಆಶಿರ್ವಾದ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚರ್ಚ್‌ಗೆ ಭೇಟಿ ನೀಡಿದವರಿಗೆ ಕೇಕ್ ನೀಡುವ ಮೂಲಕ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಚರ್ಚ್‌ನಲ್ಲಿ ಸ್ಥಾಪಿಸಿದ್ದ ಗೋದಲಿಗಳನ್ನು ಜನರು ವೀಕ್ಷಿಸಿದರು. ಕ್ರಿಸ್ತನ ಬಾಲ್ಯ ಹಾಗೂ ಜೀವನವನ್ನು ಬಿಂಬಿಸುವ ಗೊಂಬೆಗಳನ್ನು ಕುಳ್ಳರಿಸಲಾಗಿತ್ತು. ಚರ್ಚ್‌ಗೆ ಬಂದಿದ್ದವರು ಚರ್ಚ್ ಧರ್ಮಗುರುಗಳಿಂದ ಆಶೀರ್ವಾದ ಪಡೆದು ಕ್ರಿಸ್ತನ ಪ್ರತಿಮೆ ಮುಂದೆ ಇಟ್ಟಿದ್ದ ಮೇಣದಬತ್ತಿಗಳನ್ನು ಹೊತ್ತಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಚರ್ಚ್‌ಗೆ ಆಕರ್ಷಕ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಚರ್ಚ್ ರಸ್ತೆಯು ಜನರಿಂದ ತುಂಬಿತ್ತು.
ಸಂಟಾಕ್ಲಾಸ್‌ನ ವೇಷ ಧರಿಸಿದ್ದವರು ಮಕ್ಕಳಿಗೆ ಚಾಕಲೇಟ್, ಕೇಕ್ ನೀಡಿ ಸಂಭ್ರಮಿಸಿದರು. ಸಂಟಾ ಕ್ಲಾಸ್‌ನೊಂದಿಗೆ ಭಾವಚಿತ್ರ ತೆಗೆಸಿಕೊಂಡು ಪುಟಾಣಿಗಳು ಸಂಭ್ರಮಿಸಿದರು.
ಕ್ರಿಸ್‌ಮಸ್ ಪ್ರಯುಕ್ತ ಯೇಸುಕ್ರಿಸ್ತನ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಂತಕ್ಲಾಸ್‌ನೊಂದಿಗೆ ಪುಟಾಣಿಗಳು ಕುಣಿದು ಸಂಭ್ರಮಿಸಿದರು. ಸಾಂತಕ್ಲಾಸ್‌ನಿಂದ ಸಿಹಿ ಪಡೆಯಲು ಮಕ್ಕಳು ಮುಗಿಬಿದ್ದಿದ್ದರು. ಸಂಜೆಯ ನಂತರ ಚರ್ಚ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು.
ಕ್ರಿಸ್‌ಮಸ್ ಪ್ರೀತಿಯ ಸಂಕೇತವಾಗಿದೆ. ಏಸು ಕ್ರಿಸ್ತ ಕಡು ಬಡತನದಲ್ಲಿ ಹುಟ್ಟಿ ಬಡವರ ಕಷ್ಟಸುಖಗಳನ್ನು ಅರಿತು ಸೇವೆ ಸಲ್ಲಿಸಿದರು. ಏಸು ಕ್ರಿಸ್ತರ ಜೀವನ ಸಂದೇಶವನ್ನು ಅಳವಡಿಸಿಕೊಂಡು ಮೋಕ್ಷವನ್ನು ಪಡೆಯಬೇಕು ಎಂದು ಆನೇಕಲ್ ಚರ್ಚ್‌ನ ಫಾದರ್ ಶಾಂತಕುಮಾರ್ ಥಾಮಸ್ ಹೇಳಿದರು.
ಗುರುವಾರ ಸಂಜೆಯಿಂದಲೂ 2ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಚರ್ಚ್‌ಗೆ ಭೇಟಿ ನೀಡಿದ್ದಾರೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಬೇಧಭಾವವಿಲ್ಲದೇ ಆಚರಣೆಯಲ್ಲಿ ಪಾಲ್ಗೊಂಡಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಪುರಸಭಾ ನಾಮನಿರ್ದೇಶಿತ ಸದಸ್ಯ ಬಾಬು, ಚರ್ಚ್‌ನ ಕಾರ್ಯದರ್ಶಿ ಕಿಶೋರ್ ಕುಮಾರ್, ಬಾಲರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.