
ಆನೇಕಲ್: ಕ್ರಿಸ್‌ಮಸ್ ರಜೆ ಮತ್ತು ಹೊಸ ವರ್ಷದ ಸುತ್ತಮುತ್ತ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಡಿ.20ರಿಂದ ಜ.5ರವರೆಗೆ ಒಟ್ಟು 1,95,763 ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದು, ಆ ಪೈಕಿ 1,06,215 ಮಂದಿ ಸಫಾರಿ ಆನಂದ ಅನುಭವಿಸಿದ್ದಾರೆ.
ಹೊಸ ವರ್ಷದ ಮೊದಲ ದಿನವೇ 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. ಹೊಸ ವರ್ಷ ಹಿನ್ನೆಲೆಯಲ್ಲಿ ಡಿ.30ರ ಮಂಗಳವಾರ ರಜೆ ಇದ್ದರೂ ಉದ್ಯಾನ ಮತ್ತು ಸಫಾರಿ ಪ್ರವಾಸಿಗರಿಗೆ ತೆರೆದಿತ್ತು.
ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬಸ್ ಮಾರ್ಗ ಸಂಖ್ಯೆ ಹೆಚ್ಚಿಸಲಾಗಿದೆ. ನ.13ರಂದು ಸಫಾರಿ ವಾಹನದ ಮೇಲೆ ಚಿರತೆಯೊಂದು ದಾಳಿ ನಡೆಸಿ ಮಹಿಳೆಯೊಬ್ಬರ ಕೈ ಪರಚಿ ಗಾಯಗೊಳಿಸಿತ್ತು. ಘಟನೆಯ ನಂತರ ಉದ್ಯಾನದ ಆಡಳಿತ ಮಂಡಳಿ ಹವಾನಿಯಂತ್ರಿತ ಬಸ್‌ಗಳ ಸಫಾರಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತು. ಬಸ್ ಕಿಟಕಿಗಳಿಗೆ ಜಾಲರಿ ಅಳವಡಿಸಿ ಸುರಕ್ಷಿತ ಕ್ರಮ ಕೈಗೊಂಡ ನಂತರ ಪುನಾರಂಭಿಸಲಾಗಿದೆ.
ತೊಂದರೆ ಮಾಡಿದ ಚಿರತೆಯನ್ನು ಸಫಾರಿ ಸಮಯದಲ್ಲಿ ಮುಕ್ತವಾಗಿ ತೆರೆದ ಸ್ಥಳದಲ್ಲಿ ಬಿಡದೆ ದೂರವಿಟ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ತಿಳಿಸಿದ್ದಾರೆ.
ಹುಣಸೂರು ಹುಲಿಗೆ ಚಿಕಿತ್ಸೆ
ಮೈಸೂರು ಜಿಲ್ಲೆ ಹುಣಸೂರು ಅರಣ್ಯದಲ್ಲಿ ಜ.6ರಂದು ಸೆರೆಹಿಡಿಯಲಾದ ಗಂಡು ಹುಲಿಯನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ. ಉದ್ಯಾನದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದಾರೆ. 12 ವರ್ಷ ವಯಸ್ಸಿನ ಈ ಹುಲಿಯ ಮೂರು ಹಲ್ಲು ಮುರಿದಿವೆ. ಹುಲೆಗೆ ವಯಸ್ಸಾದ ಕಾರಣ ಕಾಳಜಿಯಿಂದ ಆರೈಕೆ ಮಾಡಲಾಗುತ್ತಿದೆ ಎಂದು ಉದ್ಯಾನದ ವೈದ್ಯ ಡಾ.ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.