ADVERTISEMENT

ಆನೇಕಲ್ | ತಂತಿ ಮೇಲಿನ ನಡಿಗೆಯಂತೆ ಸಂಚಾರ: ನಿತ್ಯ ತಪ್ಪದ ಗೋಳಾಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 2:09 IST
Last Updated 19 ಸೆಪ್ಟೆಂಬರ್ 2025, 2:09 IST
<div class="paragraphs"><p>ಲಿಂಕ್‌ ರಸ್ತೆಯಲ್ಲಿ ವಾಹನ ದಟ್ಟಣೆ</p></div>

ಲಿಂಕ್‌ ರಸ್ತೆಯಲ್ಲಿ ವಾಹನ ದಟ್ಟಣೆ

   

ಆನೇಕಲ್: ಐದು ಕೈಗಾರಿಕಾ ಪ್ರದೇಶ, ಬೆಂಗಳೂರಿನ ಸೆರಗಿನಲ್ಲಿರುವ ಆನೇಕಲ್‌ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರ ಯೋಗ್ಯತೆ ಕಳೆದುಕೊಂಡಿವೆ. ಗುಂಡಿಮಯ ರಸ್ತೆಯಲ್ಲಿ ನಿಧಾನಗತಿಯ ವಾಹನ ಸಂಚಾರದಿಂದ ನಿತ್ಯ ವಾಹನ ದಟ್ಟಣೆ ಇರುತ್ತದೆ. ಇವೆಲ್ಲ ಸಮಸ್ಯೆ ಸಹಿಸಿಕೊಂಡು ಸವಾರರ ಗೊಣಗುತ್ತಾ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. 

ತಾಲ್ಲೂಕಿನ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದೆ. ದ್ವಿಚಕ್ರ ವಾಹನ ಸವಾರರು ತಂತಿಯ ಮೇಲಿನ ನಡಿಗೆಯಂತೆ ಓಡಾಡಬೇಕಾಗಿದೆ. ಧೂಳಿನಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸವಾಗಿದೆ. 

ADVERTISEMENT

ಚಂದಾಪುರ–ಆನೇಕಲ್‌ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ಕಷ್ಟಪಟ್ಟು ಸಂಚರಿಸಬೇಕಾಗಿದೆ. ದ್ವಿಪಥ ರಸ್ತೆಯ ಎರಡು ರಸ್ತೆಗಳನ್ನು ಬೋಟುಕಲ್ಲುಗಳನ್ನು ತುಂಬಿರುವುದರಿಂದ ವಾಹನಗಳು ಸಂಚರಿಸುವುದೇ ಕಷ್ಟವಾಗಿದೆ. ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸಲಾಗದೇ ಬನಹಳ್ಳಿ, ಕಾಚನಾಯಕನಹಳ್ಳಿ ರಸ್ತೆಯನ್ನು ಪರ್ಯಾಯವಾಗಿ ಬಳಸುತ್ತಿದ್ದಾರೆ.

ಆನೇಕಲ್‌-ಅತ್ತಿಬೆಲೆ ರಸ್ತೆಯು ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅತ್ತಿಬೆಲೆ-ಬಳ್ಳೂರು ರಸ್ತೆಯೂ ರಸ್ತೆ ಗುಂಡಿಗಳ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ರಸ್ತೆಗಳು ಹದಗೆಟ್ಟಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಅಪಘಾತಗಳು ಹೆಚ್ಚಾಗಿವೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಭಾರಿ ಗುಂಡಿಗಳು ಬಿದ್ದಿವೆ. ಇದರಿಂದ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುತ್ತಿದ್ದಾರೆ. 

ಆನೇಕಲ್‌ ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿವೆ. ಬೊಮ್ಮಸಂದ್ರ, ಅತ್ತಿಬೆಲೆ, ಬೊಮ್ಮಸಂದ್ರ, ವೀರಸಂದ್ರ, ಎಲೆಕ್ಟ್ರಾನಿಕ್‌ಸಿಟಿ ಕೈಗಾರಿಕಾ ಪ್ರದೇಶಗಳಿವೆ. ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ರಾಷ್ಟ್ರೀಯ ಹೆದ್ದಾರಿ–44, ಆನೇಕಲ್‌ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿ, ವೀರಸಂದ್ರ, ಹುಸ್ಕೂರು, ಹೆಬ್ಬಗೋಡಿ, ಚಂದಾಪುರ, ಅತ್ತಿಬೆಲೆವರೆಗೂ ಸಾಗಲಿದೆ. ಆದರೆ ಈ ಪ್ರದೇಶದ ರಸ್ತೆಗಳ ಸ್ಥಿತಿಯೂ ಚೆನ್ನಾಗಿಲ್ಲ. ಇದರಿಂದ ಕಾರ್ಮಿಕರ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

ಒಂದೆರಡು ಗಂಟೆ ಮುಂಚೆಯೇ ಹೊರಡಬೇಕು

ಪ್ರಮುಖ ರಸ್ತೆಗಳೇ ಹದಗೆಟ್ಟಿರುವುದರಿಂದ ನಿಧಾನಗತಿಯ ಸಂಚಾರದಿಂದ ನಿತ್ಯ ವಾಹನ ದಟ್ಟಣೆ ಇಲ್ಲಿನ ವಾಹನ ಸವಾರರಿಗೆ ತಪ್ಪಿದಲ್ಲ. ಕೈಗಾರಿಕಾ ಪ್ರದೇಶ ಎಂದರೆ ಟ್ರಾಫಿಕ್‌ ಜಾಮ್‌, ಟ್ರಾಫಿಕ್‌ ಜಾಮ್‌ ಎಂದರೆ ಕೈಗಾರಿಕಾ ಪ್ರದೇಶ ಎನ್ನುವಂತಾಗಿದೆ.

ಜಿಗಣಿ, ಬೊಮ್ಮಸಂದ್ರ, ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಹೋಗಬೇಕಾದರೆ ಒಂದೆರಡು ಗಂಟೆ ಮುಂಚಿತವಾಗಿಯೇ ಮನೆಯಿಂದ ಹೊರಡಬೇಕು. ಚಂದಾಪುರ, ಅತ್ತಿಬೆಲೆ ಮುಖ್ಯ ರಸ್ತೆ, ಆನೇಕಲ್‌ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸಾಲು ದೃಶ್ಯ ಸಾಮಾನ್ಯವಾಗಿದೆ.

ಕಾರ್ಮಿಕರು ಮತ್ತು ವಿದ್ಯಾರ್ಥಿಗಲು ರಸ್ತೆ ಗುಂಡಿಗಳಿಂದ ಪ್ರಮುಖ ಭಾದಿತರು. ಇವರು ನಿಗದಿತ ಸಮಯಕ್ಕೆ ಗಮ್ಯಸ್ಥಾನ ತಲುಪಲಾಗಿದೆ ಪರಿತಪಿಸುವಂತಾಗಿದೆ.

ನಿತ್ಯ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗಿದೆ. ಕಾರ್ಮಿಕರೇ ಹೆಚ್ಚಿರುವ ಈ ಕೈಗಾರಿಕ ಪ್ರದೇಶಗಳ ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿ ನೀಡಬೇಕು.
ಮಹದೇವಯ್ಯ, ಬೊಮ್ಮಸಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.