
ಆನೇಕಲ್: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ 18 ವರ್ಷದೊಳಗಿನ ಮಕ್ಕಳು ‘ನಮ್ಮನ್ನ ಯಾರು ಕೇಳುವವರು’ ಎನ್ನುವಂತೆ ರಾಜರೋಷವಾಗಿ ವಾಹನಗಳನ್ನು ಚಲಾಯಿಸುತ್ತಿದ್ದು, ಅಪಾಯಕಾರಿ ಅತಿವೇಗವಾಗಿ ಬೈಕ್‌ಗಳನ್ನು ಓಡಿಸುತ್ತಿರುವುದು ಇತರೆ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಭೀತಿ ಹುಟ್ಟಿಸಿದೆ.
ವಾರದ ಹಿಂದೆ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ವೇ ಹೊಸಕೋಟೆ ಬಳಿ ನಡೆದ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಹಾಗೂ ತನ್ನದಲ್ಲದ ತಪ್ಪಿಗೆ ಒಂಟಿ ತಾಯಿಗೆ ಆಧಾರವಾಗಿದ್ದ ಯುವಕ ಸೇರಿ ಏಳು ಮಂದಿ ಬಲಿಯಾಗಿದ್ದರು. ಇದಕ್ಕೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಅತಿವೇಗದಿಂದ ಕಾರು ಚಾಲನೆ ಮಾಡಿದ್ದೆ ಕಾರಣ ಎಂದು ಪೊಲೀಸ್ ತನಿಖೆಯಾಗಿದೆ ಸಾಬೀತಾಗಿದೆ. ಇದರಿಂದ ಬುದ್ಧಿ ಕಲಿಯದ ಪೋಷಕರು ಮಕ್ಕಳಿಗೆ ವಾಹನ ನೀಡುತ್ತಿದ್ದಾರೆ. ಮಕ್ಕಳು ಸಹ ಆ ಪ್ರಕರಣ ನೋಡಿ ಎಚ್ಚೆತ್ತುಕೊಳ್ಳದೆ ಮೈ ಮರೆತು ವಾಹನ ಚಲಾಯಿಸುತ್ತಿದ್ದಾರೆ.
18 ವರ್ಷದೊಳಗಿನವರು ಯಾವುದೇ ವಾಹನ ಚಲಾಯಿಸಬಾರದು ಎಂಬ ನಿಯಮ ಕಾನೂನು ಪುಸ್ತಕಕಷ್ಟೇ ಸೀಮಿತ ಎನ್ನುವಂತೆ ಪಟ್ಟಣದಲ್ಲಿ 13–14 ವಯಸ್ಸಿನ ಶಾಲಾ ಮಕ್ಕಳು ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದಾರೆ.
ಬೆಳಗ್ಗೆ–ಸಂಜೆಯಾದರೆ ಸಮವಸ್ತ್ರತೊಟ್ಟ ವಿವಿಧ ಶಾಲೆಗಳ ವಿದ್ಯಾರ್ಥಿಗಳು 70-80ರ ವೇಗದಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿರುವುದು ಹೆಚ್ಚಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರು ನಿಗಾ ವಹಿಸಿ ಅಪಾಯ ತಪ್ಪಿಸಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.
ಶಾಲೆಗೆ ಹೋಗುವ ಸಂದರ್ಭದ ಮತ್ತು ಶಾಲೆಯಿಂದ ಬಿಟ್ಟ ನಂತರ14-16 ವಯಸ್ಸಿನ ವಿದ್ಯಾರ್ಥಿಗಳು ತಾವು ಮತ್ತು ತಮ್ಮೊಂದಿಗೆ ತಮ್ಮ ಸ್ನೇಹಿತರನ್ನು ಕೂರಿಸಿಕೊಂಡು ಆನೇಕಲ್ ಪಟ್ಟಣದಲ್ಲಿ ಓಡಾಡುತ್ತಿರುವುದು ಹೆಚ್ಚಾಗಿದೆ. ಹಲವು ಬಾರಿ ಮೂರು, ನಾಲ್ಕು ಮಂದಿ ಬೈಕ್‌ಗಳಲ್ಲಿ ಕುಳಿತು ಅಪಾಯಕಾರಿಯಾಗಿ ಓಡಾಡುವುದು ಕಂಡು ಬರುತ್ತದೆ. ಕರ್ಕಶ ಶಬ್ದದ ಹಾರ್ನ್, ಹೆಚ್ಚಿನ ವೇಗ ಮತ್ತು ಪರವಾನಗಿ ಇಲ್ಲದೆ ಗಾಡಿ ಓಡಿಸುತ್ತಿರುವುದನ್ನು ಗಮನಸಿದರೆ ಇದರ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಣುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನು ನೀಡಿದ್ದರಿಂದ ನಗರ ಪ್ರದೇಶದಲ್ಲಿ ಪೊಲೀಸರು ₹15-20ಸಾವಿರದವರೆಗೆ ದಂಡ ವಿಧಿಸಿದ್ದನ್ನು ನೋಡಿದ್ದೇವೆ. ಇದೇ ಕ್ರಮವನ್ನು ಆನೇಕಲ್ ಪಟ್ಟಣದಲ್ಲಿ ಅನುಸರಿಸಬೇಕು. ಇಲ್ಲಿ ಸಂಚಾರ ನಿಯಮಗಳೆ ಇಲ್ಲದಂತಾಗಿದೆ.ಚಿನ್ನಸ್ವಾಮಿ ಸ್ಥಳೀಯ ಆನೇಕಲ್
ಬಾಲಕರು ಓಡಿಸುವ ವಾಹನ ಜಪ್ತಿ
ಅಪ್ರಾಪ್ತ ವಯಸ್ಸಿನ ಬಾಲಕರು ದ್ವಿಚಕ್ರ ವಾಹನಗಳ ಚಲಾಯಿಸುತ್ತಿರುವ ಬಗ್ಗೆ ಆನೇಕಲ್ ಪೊಲೀಸರು ನಿಗಾ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ವಾಹನಗಳನ್ನು ಜಪ್ತಿ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹಾಗಾಗಿ ಪೋಷಕರು ಅಪ್ರಾಪ್ತರಿಗೆ ವಾಹನಗಳನ್ನು ನೀಡಬೇಡಿ ಎಂದು ಆನೇಕಲ್ ಪೊಲೀಸ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ತಿಳಿಸಿದರು.
ಹೊಸಕೋಟೆ ಪ್ರಕರಣ ಬಳಿಕ ಭಯ ಹುಟ್ಟಿದೆ...
ಮಕ್ಕಳು ಪೋಷಕರಿಗೆ ಹೇಳದೇ ವಾಹನ ಚಲಾಯಿಸುತ್ತಾರೆ. ಅವರನ್ನು ನಿಭಾಯಿಸುವುದೇ ಕಷ್ಟವಾಗಿದೆ. ಹೊಸಕೋಟೆಯ ಅಪಘಾತದ ನಂತರ ದ್ವಿಚಕ್ರ ವಾಹನವನ್ನೇ ಮಾರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಮಕ್ಕಳು ಮುಚ್ಚಿಟ್ಟು ಮಾಡುವ ತಪ್ಪಿಗೆ ಪೋಷಕರು ಹೊಣೆಗಾರರಾಗಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಮೋಹನ್.
ಪೋಷಕ ಪೊಲೀಸರ ನಿಗಾ ತಮ್ಮ ಮಕ್ಕಳು ಬೈಕ್ ಚಲಾಯಿಸುವುದರ ಬಗ್ಗೆ ಪೋಷಕರು ಸಹ ಗಮನ ವಹಿಸಬೇಕು. ತಮ್ಮ ಮಕ್ಕಳಿಗೆ ವಾಹನ ನೀಡಬಾರದು. 18 ವರ್ಷ ತುಂಬಿ ಪರವಾನಗಿ ವಿಮೆ ಸೇರಿದಂತೆ ಅವಶ್ಯಕ ದಾಖಲೆ ಪಡೆದ ಬಳಿಕ ವಾಹನ ನೀಡಬೇಕು. ಈ ಬಗ್ಗೆ ಪೊಲೀಸರು ನಿಗಾವಹಿಸಬೇಕು. ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆಗೆ ಬ್ರೇಕ್ ಹಾಕಬೇಕು ಜಗದೀಶ್ ಶಿಕ್ಷಕ