ADVERTISEMENT

ಆನೇಕಲ್: ರಸ್ತೆಯಲ್ಲಿ ಪೈರು ನಾಟಿ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 7:06 IST
Last Updated 29 ಜುಲೈ 2025, 7:06 IST
ಆನೇಕಲ್‌ ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಘವನಗರ ಗುಡ್ಡಹಟ್ಟಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಸ್ಥಳೀಯರು ತಮಟೆ ಚಳವಳಿ ನಡೆಸಿ ಪ್ರತಿಭಟನೆ ನಡೆಸಿದರು
ಆನೇಕಲ್‌ ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಘವನಗರ ಗುಡ್ಡಹಟ್ಟಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಸ್ಥಳೀಯರು ತಮಟೆ ಚಳವಳಿ ನಡೆಸಿ ಪ್ರತಿಭಟನೆ ನಡೆಸಿದರು   

ಆನೇಕಲ್: ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಘವ ನಗರದಿಂದ ಗುಡ್ಡಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕೆಸರುಗದ್ದೆಯಂತಾದ್ದು, ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಮತ್ತು ಮಹಿಳೆಯರು ರಸ್ತೆಯಲ್ಲಿಯೇ ಪೈರು ನಾಟಿ ಮಾಡಿ ಪ್ರತಿಭಟನೆ ನಡೆಸಿದರು.

ತಮಟೆ ಚಳುವಳಿ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆಯಿಂದ ರಸ್ತೆ ಕೆಸರುಮಯವಾಗಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ರಸ್ತೆ ಅಭಿವೃದ್ಧಿಪಡಿಸಲು ಹಲವಾರು ಬಾರಿ ಮನವಿ ಮಾಡಿದರು ಸಹ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಹಾಗಾಗಿ ಗ್ರಾಮಸ್ಥರು ತಮಟೆ ಚಳುವಳಿ ನಡೆಸುವ ಮೂಲಕ ಕಿವಿ ಕೇಳಿಸದ ಮತ್ತು ಕಣ್ಣು ಮುಚ್ಚಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಗಡಿನಾಡು ಜೈ ಭೀಮ್ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕ್ರಾಂತಿ ಮುನಿರಾಜು ತಿಳಿಸಿದರು.

ADVERTISEMENT

ರಾಘವ ನಗರದಿಂದ ಗುಡಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹರಗೆಟ್ಟಿರುವುದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ವಾಹನಗಳಿಂದ ಬಿದ್ದು ಕೈಕಾಲು ಮುರಿದು ಕೊಳ್ಳುತ್ತಿದ್ದಾರೆ. ರಸ್ತೆಯನ್ನು ಸರಿಪಡಿಸುವಂತೆ ನೆರಳೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಿಲ್ಲ ಎಂದರು.

ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ, ಮಹಿಳೆಯರು ರಸ್ತೆ ಮಧ್ಯದಲ್ಲಿಯೇ ಪೈರು ನಾಟಿ ಮಾಡುವ ಮೂಲಕ ಮತ್ತು ಸ್ಥಳೀಯರು ತಮಟೆ ಬಾರಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಕೆಸರುಗದ್ದೆಯಂತಿರುವ ರಸ್ತೆಯಲ್ಲಿ ಪೈರು ನಾಟಿ ಮಾಡಿದ ಮಹಿಳೆಯರು

15 ದಿನದ ಗಡುವು 

ರಾಘವ ನಗರದಿಂದ ಗುಡ್ಡಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 15 ದಿನಗಳ ಒಳಗಾಗಿ ಸರಿಪಡಿಸದಿದ್ದರೆ ಸ್ಥಳೀಯ ನಿವಾಸಿಗಳು ಒಗ್ಗೂಡಿ ಸ್ವಂತ ಹಣದಲ್ಲಿಯೇ ರಸ್ತೆ ಸರಿಪಡಿಸಿಕೊಳ್ಳುತ್ತೇವೆ. ಆದರೆ ಮುಂಬರುವ ಚುನಾವಣೆಗಳಲ್ಲಿ ಯಾವುದೇ ಸದಸ್ಯರು ನಮ್ಮ ಮತ ಕೇಳುವುದಕ್ಕೆ ಬರಬಾರದು ಎಂದು ಪ್ರತಿಭಟನನಿರತರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.