ADVERTISEMENT

ಪಿಡಿಒ ಮೇಲೆ ಕ್ರಮಕ್ಕೆ ಪತ್ರ ರವಾನೆ

ಹಣ ದುರುಪಯೋಗ ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 12:44 IST
Last Updated 9 ಅಕ್ಟೋಬರ್ 2019, 12:44 IST

ವಿಜಯಪುರ: ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಬೇರೆ ಅಧಿಕಾರಿಯನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪುನಃ ಅದೇ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿದ್ದಾರೆ. ಪಿಡಿಒ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿ ಹೊಸಹುಡ್ಯ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಪ್ಪ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಸದಸ್ಯ ನರಸಿಂಹಪ್ಪ ಮಾತನಾಡಿ, ‘ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಸೇರಿ ಇಲ್ಲಿ ಪಿಡಿಒ ನಡೆಸಿರುವ ಅಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಕೊಟ್ಟಿದ್ದೆವು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಯೋಜನೆಯ ಕಾಮಗಾರಿಗಳು, ದನದ ಕೊಟ್ಟಿಗೆಗಳ ನಿರ್ಮಾಣ, ಖಾತೆಗಳ ಬದಲಾವಣೆ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಹಣಕೊಡದಿದ್ದರೆ ಅಧಿಕಾರಿ ಕೆಲಸ ಮಾಡುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಟ್ಟಿರುವ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಇವರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಇವರು ಯಾವ ಸದಸ್ಯರಿಗೂ ಗೌರವ ಕೊಡುವುದಿಲ್ಲ. ಈ ಅಧಿಕಾರಿ ನಮಗೆ ಬೇಡ ಬೇರೆ ಅಧಿಕಾರಿ ಕೊಡಿ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ದೂರಿನಲ್ಲೇನಿದೆ?

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೋಜಮೂರ್ತಿ ಮಾತನಾಡಿ, ನಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರೊಟ್ಟಿಗೆ ನಡೆದುಕೊಳ್ಳುವ ರೀತಿ ಸರಿಯಾಗಿಲ್ಲ, ಅಭಿವೃದ್ಧಿಪರವಾದ ಕಾಳಜಿಯಿಲ್ಲ ಆದ್ದರಿಂದ ಜಿಲ್ಲಾ ಪಂಚಾಯಿತಿಗೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟಿದ್ದೇನೆ.

14 ನೇ ಹಣಕಾಸು ಯೋಜನೆಯಲ್ಲಿ ಮಾ.23ರಂದು ₹ 7,006, ₹ 10,843, ₹ 16,552, ಸೇರಿ ಒಟ್ಟು ₹ 34,401 ಹಣವನ್ನು ತಮ್ಮ ಹೆಸರಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ನಿರ್ಮಾಣಕ್ಕೆ ಚುನಾಯಿತ ಸಮಿತಿಯ ಅನುಮತಿಯಿಲ್ಲದೆ ಎನ್ಒಸಿ ನೀಡಿದ್ದಾರೆ. ಶೇ 25ರ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪಂಚಾಯಿತಿಗೆ ಬರಬೇಕಾಗಿರುವ ಆದಾಯವನ್ನು ನಷ್ಟಪಡಿಸಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.