ADVERTISEMENT

ಆನೇಕಲ್: ವಲಸೆ ಕಾರ್ಮಿಕರ ವಾಪಸ್‌ಗೆ ವ್ಯವಸ್ಥೆ

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 16:04 IST
Last Updated 27 ಏಪ್ರಿಲ್ 2020, 16:04 IST
ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ತಹಶೀಲ್ದಾರ್ ಸಿ.ಮಹಾದೇವಯ್ಯ ಮಾತನಾಡಿದರು
ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ತಹಶೀಲ್ದಾರ್ ಸಿ.ಮಹಾದೇವಯ್ಯ ಮಾತನಾಡಿದರು   

ಆನೇಕಲ್: ಹೊರ ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರು ತಮ್ಮ ಜಿಲ್ಲೆಗಳಿಗೆ ತೆರಳಲು ಇಚ್ಛಿಸಿದರೆ ಸರ್ಕಾರ ವಾಹನ ಸೌಲಭ್ಯ ನೀಡಿ ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ. ಹಾಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಸಿ.ಮಹಾದೇವಯ್ಯ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಹೊರ ರಾಜ್ಯಗಳ ವಲಸೆ ಕಾರ್ಮಿಕರ ಪಟ್ಟಿಯನ್ನು ತಯಾರಿಸಿಕೊಳ್ಳುವಂತೆ ತಿಳಿಸಿದರು. ಆದರೆ ಹೊರರಾಜ್ಯಗಳಿಗೆ ಕಳುಹಿಸಿಕೊಡುವ ಸಂಬಂಧ ಸರ್ಕಾರದಿಂದ ಯಾವುದೇ ಸೂಚನೆಗಳು ಬಂದಿಲ್ಲ ಎಂದರು.

ADVERTISEMENT

ತಾಲ್ಲೂಕಿನಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ಗಳು ಇಲ್ಲದೇ ಇದಲ್ಲಿ ಆಹಾರದ ಕಿಟ್‌ಗಳನ್ನು ಪೂರೈಸಬೇಕಾಗಿದೆ. ಆನೇಕಲ್‌ ತಾಲ್ಲೂಕಿನಲ್ಲಿ 26 ಸಾವಿರ ಕುಟುಂಬಗಳನ್ನು ಗುರುತಿಸಿದ್ದು ಶೀಘ್ರದಲ್ಲಿ ಈ ಕುಟುಂಬಗಳಿಗೆ ದಿನಸಿಯ ಕಿಟ್‌ಗಳನ್ನು ವಿತರಿಸಲಾಗುವುದು. ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಕಿಟ್‌ಗಳು ತಲುಪುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಪಿಡಿಒಗಳು, ಮುಖ್ಯಾಧಿಕಾರಿಗಳು ಮತ್ತು ನೋಡೆಲ್‌ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.

ಪತ್ರಕರ್ತರಿಗೆ ವೈದ್ಯಕೀಯ ತಪಾಸಣೆ ಮಾಡುವ ಸಂಬಂಧ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಿನಾಂಕ ನಿಗದಿ ಪಡಿಸಿ ಆನೇಕಲ್‌ ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗೂ ತಪಾಸಣೆ ನಡೆಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

‘ಯಾವುದೇ ಗ್ರಾಮಗಳಲ್ಲಿ ಸೋಂಕಿತರ ಸಂಪರ್ಕಿತರು ಕಂಡು ಬಂದಲ್ಲಿ ಕ್ವಾರಂಟೈನ್‌ ಮಾಡುವ ಸಂಬಂಧ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಆನೇಕಲ್‌ ತಾಲ್ಲೂಕಿನ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡು ಗ್ರಾಮದಲ್ಲಿ 130 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ’ ಎಂದರು.

‘ಮಾಂಸದ ಅಂಗಡಿಗಳಲ್ಲಿ ದರ ಹೆಚ್ಚಳ ಮಾಡಿರುವ ಬಗ್ಗೆ ದೂರುಗಳಿವೆ. ಕಡ್ಡಾಯವಾಗಿ ದರ ಪಟ್ಟಿಯನ್ನು ಪ್ರಕಟಿಸಿ ಅದರಂತೆ ಮಾರಾಟ ಮಾಡಬೇಕು. ಯಾವುದೇ ದೂರುಗಳು ಬಂದಲ್ಲಿ ಲೈಸೆನ್ಸ್‌ ರದ್ದು ಮಾಡಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಮಾತನಾಡಿ, ‘ಕೊರೊನಾ ವಿರುದ್ಧ ಹೋರಾಟವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಾಗಿದೆ. ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕೊರೊನಾ ಸೋಂಕು ತಡೆಯದಂತೆ ಕ್ರಮ ಕೈಗೊಳ್ಳಬೇಕು. ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭಗಳಲ್ಲಿ ಅರ್ಹರಿಗೆ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಯಾವುದೇ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.