ADVERTISEMENT

ಆನೇಕಲ್ | ಕಲಾವಿದರ ಪತ್ತಿನ ಸಹಕಾರ ಸಂಘ ಅಗತ್ಯ: ನಿಶ್ಚಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:19 IST
Last Updated 21 ನವೆಂಬರ್ 2025, 5:19 IST
ಆನೇಕಲ್‌ನಲ್ಲಿ ನಡೆದ ರಾಜ್ಯೋತ್ಸವ ಮತ್ತು ಕೆಂಪೇಗೌಡ ಜಯಂತಿಯಲ್ಲಿ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು
ಆನೇಕಲ್‌ನಲ್ಲಿ ನಡೆದ ರಾಜ್ಯೋತ್ಸವ ಮತ್ತು ಕೆಂಪೇಗೌಡ ಜಯಂತಿಯಲ್ಲಿ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು   

ಆನೇಕಲ್: ಕಲಾವಿದರ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಣೆಗಾಗಿ ಕಲಾವಿದರ ಪತ್ತಿನ ಸಹಕಾರ ಸಂಘಗಳು ಸ್ಥಾಪನೆಯಾಗಬೇಕೆಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀರಾಮ ಕುಟೀರದಲ್ಲಿ ರಾಜ್ಯ ಒಕ್ಕಲಿಗರ ಜಾಗೃತಿ ಸಂಘ, ರೇಣುಕಾರಾಧ್ಯ ಕಲಾವಿದರ ಬಳಗ, ಆನೇಕಲ್ ಚಂದನ ಸೇವಾ ಟ್ರಸ್ಟ್, ಗಡಿನಾಡು ರಂಗಭೂಮಿ ಕಲಾವಿದರ ಬಳಗದಿಂದ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮತ್ತು ರಾಜ್ಯೋತ್ಸವದಲ್ಲಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಕಲಾವಿದರ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಲಿದೆ. ಈ ಸಂಘದ ಮೂಲಕ ರಂಗಭೂಮಿ ಕಲಾವಿದರಿಗೆ ಸಾಲ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗುತ್ತಿದೆ. ಇಂತಹ ಕಲಾವಿದರ ಪತ್ತಿನ ಸಹಕಾರ ಸಂಘಗಳು ಬೆಂಗಳೂರು ನಗರ ಜಿಲ್ಲೆ ಮತ್ತು ಆನೇಕಲ್ ತಾಲೂಕಿನಲ್ಲಿಯೂ ಆಗಬೇಕು. ಇದರಿಂದಾಗಿ ಕಲಾವಿದರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.

ADVERTISEMENT

ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರು ರಂಗಭೂಮಿ ಹಿನ್ನೆಲೆಯಲ್ಲಿ ಬಂದಿದ್ದರಿಂದ ಅವರಿಗೆ ದಾದಾಸಾಹೇಬ್ ಫಾಲ್ಕೆ ಅಂತಹ ಪ್ರಶಸ್ತಿ ದೊರೆತಿದೆ. ರಂಗಭೂಮಿ ಕಲಾವಿದರು ಕಷ್ಟ ಬಡತನದ ನಡುವೆಯೂ ಸಮರ್ಪಣಾ ಭಾವದಿಂದ ರಂಗಭೂಮಿ ಕಲೆ ಪ್ರದರ್ಶಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ರಂಗಭೂಮಿಯ ಮೂಲ ಬೇರು ನಶಿಸಿ ಹೋಗುತ್ತಿದೆ. ರಂಗಭೂಮಿ ಪ್ರಚಾರ ಹಾಗೂ ಶಕ್ತಿ ತುಂಬಲು ಎಲ್ಲರು ನಾಟಕಗಳನ್ನು ನೋಡಬೇಕೆಂದು ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮುನಿರಾಜು ಗೌಡ, ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಲ್ಲ, ಎಲ್ಲಾ ಸಮುದಾಯಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಅವರ ತತ್ವ ಸಿದ್ಧಾಂತ ಪಾಲಿಸಿ, ಮುಂದುವರಿಸಿಕೊಂಡು ಹೋಗಲು ಸಂಘವೊಂದನ್ನು ರಚಿಸಲಾಗಿದೆ. ಸಂಘವು ಕರ್ನಾಟಕದಲ್ಲಿ 50 ಶಾಖೆ ಮತ್ತು ತಮಿಳುನಾಡಿನಲ್ಲಿ 10 ಶಾಖೆ ಹೊಂದಿದ್ದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದರು.

ಗಡಿನಾಡು ರಂಗಭೂಮಿ ಕಲಾವಿದರ ಬಳಗದ ಎನ್‌.ಎಂ.ಆರ್.ಮಂಜುನಾಥ್‌, ಕಲಾವಿದರ ಬಳಗದ ರೇಣುಕಾರಾಧ್ಯ, ಕುಪೇಂದ್ರ ಗೌಡ, ಮಹದೇಶ ಗೌಡ, ಶ್ರೀನಿವಾಸಾಚಾಚಾರಿ, ಪರಮಶಿವಯ್ಯ, ಹಾರಗದ್ದೆ ಮುನಿಸ್ವಾಮಿಣ್ಣ, ಶ್ರೀಧರ್‌, ನಾಗರಾಜು ಇದ್ದರು

ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ರಂಗಭೂಮಿ ಕಲಾವಿದರನ್ನು ಸತ್ಕರಿಸಲಾಯಿತು.

ನಾಟಕೋತ್ಸವಕ್ಕೆ ತೆರೆ ರೇಣುಕಾರಾಧ್ಯ ಕಲಾವಿದರ ಬಳಗ ಆನೇಕಲ್ ಚಂದನ ಸೇವಾ ಟ್ರಸ್ಟ್ ಗಡಿನಾಡು ರಂಗಭೂಮಿ ಕಲಾವಿದರ ಬಳಗದಿಂದ ಕಳೆದ 20 ದಿನಗಳಿಂದಲೂ ಪ್ರತಿದಿನ ನಾಟಕ ಪ್ರದರ್ಶನ ಆಯೋಜಿಸಲಾಗುತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರಂಗಭೂಮಿ ಕಲಾವಿದರು ನಾಟಕ ಪ್ರದರ್ಶನ ನೀಡಿದರು. ನವೆಂಬರ್‌ 1ರಿಂದ ಆರಂಭವಾದ ನಾಟಕ ಪ್ರದರ್ಶನ ನ.20ರಂದು ಗೆರಟಿಗನಬೆಲೆಯ ಕಲಾವಿದರ ದಕ್ಷ ಯಜ್ಞ ನಾಟಕ ಪ್ರದರ್ಶನದೊಂದಿಗೆ ನಾಟಕೋತ್ಸವಕ್ಕೆ ತೆರೆ ಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.