ADVERTISEMENT

ದೇವನಹಳ್ಳಿ: ಚುಮು ಚುಮು ಚಳಿಯಲ್ಲಿ ಅವರೆ, ತೊಗರಿ ಘಮ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 21 ಡಿಸೆಂಬರ್ 2025, 2:15 IST
Last Updated 21 ಡಿಸೆಂಬರ್ 2025, 2:15 IST
ವರ್ತಕನೊಬ್ಬ ವಾಹನವೊಂದರಲ್ಲಿ ತುಂಬಿ ತಂದಿದ್ದ ಅವರೆ ಖರೀದಿಸಲು ವಿಜಯಪುರ ಟೌನ್ ಹಾಲ್ ಸರ್ಕಲ್‍ನಲ್ಲಿ ಮುಗಿಬಿದ್ದ ಗ್ರಾಹಕರು.
ವರ್ತಕನೊಬ್ಬ ವಾಹನವೊಂದರಲ್ಲಿ ತುಂಬಿ ತಂದಿದ್ದ ಅವರೆ ಖರೀದಿಸಲು ವಿಜಯಪುರ ಟೌನ್ ಹಾಲ್ ಸರ್ಕಲ್‍ನಲ್ಲಿ ಮುಗಿಬಿದ್ದ ಗ್ರಾಹಕರು.   

ವಿಜಯಪುರ (ದೇವನಹಳ್ಳಿ): ಚಳಿಗಾಲದ ಸಮೃದ್ಧ ಬೆಳೆಯುವ ನಾಟಿ ಹಸಿ ಅವರೆ, ತೊಗರಿಕಾಯಿ ಜತೆಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆವರೆ, ತೊಗರಿಕಾಯಿಗೆ ಉತ್ತಮ ಬೆಲೆ ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕೆಲ ದಿನಗಳ ಹಿಂದೆ ಪಟ್ಟಣದ ರಸ್ತೆ ಬದಿಗಳಲ್ಲಿ ಅಪರೂಪಕ್ಕೆ ಕಾಣಿಸುತ್ತಿದ್ದ ಅವರೆ, ತೊಗರಿ ಕಾಯಿ ಮಳಿಗೆಗಳು ಈಗ ನಾಯಿಕೊಡೆಯಂತೆ ತಲೆತ್ತಿವೆ. ಎಲ್ಲೆಡೆ ರಾಶಿ, ರಾಶಿ ಅವರೆ, ತೊಗರಿಕಾಯಿ ಕಾಣುತ್ತಿವೆ. ಮಾರಾಟದ ಭರಾಟೆಯೂ ಅಷ್ಟೇ ಜೋರಾಗಿದೆ.

ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಅವರೆ, ತೊಗರಿಕಾಯಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಸಹಜವಾಗಿ ಬೆಲೆ ಏರಿಕೆ ಕಂಡು ಬಂದರೂ ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ.

ಈ ಮೊದಲು ರಾಗಿ ಹೊಲಗಳಲ್ಲಿ ಸಾಂಪ್ರದಾಯಿಕವಾಗಿ ಏಳೆಂಟು ಅಡಿ ಸಾಲಿನಲ್ಲಿ ಅವರೆ ಬಿತ್ತನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಇದನ್ನು ಕೈ ಬಿಟ್ಟಿರುವ ಪರಿಣಾಮ ರಾಗಿ ಹೊಲಗಳಲ್ಲಿ ಆವರೆ ಬಿತ್ತನೆಯಲ್ಲಿ ಪ್ರಮಾಣದಲ್ಲಿ ಕುಸಿತಗೊಂಡಿದೆ.

ರಾಗಿ ಕಟಾವು ಮಾಡಲು ಕೂಲಿ ಕಾರ್ಮಿಕರ ಅಭಾವದಿಂದ ಇತ್ತೀಚಿನ ವರ್ಷಗಳಲ್ಲಿ ರೈತರು ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ.  ಯಂತ್ರಗಳಿಂದ ಕಟಾವು ಆಗುವುದರಿಂದ ಹೊಲಗಳಲ್ಲಿ ಅವರೆ ಬಿತ್ತನೆ ಮಾಡಿದರೂ ಪ್ರಯೋಜನವಿಲ್ಲ. ಅವರೆ ಬೆಳೆಯುಲ್ಲಿ ಆಸಕ್ತಿ ಹೊಂದಿರುವ ರೈತರು ಪ್ರತ್ಯೇಕವಾಗಿ ಆವರೆ ಬಿತ್ತನೆ ಮಾಡುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಬಂದಷ್ಟು ವೇಗಕ್ಕಿಂತ ಬೇಗನೇ ಅವರೆ, ತೊಗರಿಕಾಯಿ ಖಾಲಿಯಾಗುತ್ತಿದೆ. ಒಂದು ಕೆ.ಜಿ ತೊಗರಿಕಾಯಿ ₹40 ರಿಂದ ₹50 ಮತ್ತು ಅವರೆ ₹60 ಇದೆ. ಕೆಲವು ಕಡೆಗಳಲ್ಲಿ ತಾಜಾ ಕಾಯಿ ₹60 ರಿಂದ ₹70 ವರೆಗೆ ಮಾರಾಟವಾಗುತ್ತಿದೆ. ಗ್ರಾಹಕರು ದರದಲ್ಲಿ ಎಷ್ಟೇ ಚೌಕಾಸಿ ಮಾಡಿದರೂ ವ್ಯಾಪಾರಸ್ಥರು ಮಣಿಯುತ್ತಿಲ್ಲ.

ಈಗ ಧನುರ್ ಮಾಸವಾದ ಕಾರಣ ಅನೇಕರು ಮಾಂಸಾಹಾರ ಸೇವಿಸುವುದಿಲ್ಲ. ಹೀಗಾಗಿ ಅವರೆ, ತೊಗರಿಯಲ್ಲಿ ಸಾರು ಮಾಡುತ್ತಾರೆ. ಅಲ್ಲದೇ ವಿವಿಧ ಭಕ್ಷ್ಯ ತಯಾರಿಸಲು ಬಳಕೆ ಮಾಡುವುದರಿಂದ ಅವರೆ ಮತ್ತು ತೊಗರಿಕಾಯಿಗೆ ಹೆಚ್ಚು ಬೇಡಿಕೆ ಬಂದಿದೆ.

ಕಳೆದ ವಾರ ಮೋಡಕವಿದ ವಾತಾವರಣ ಕಂಡು ಬಂತು. ಈಗ ಚುಮು ಚುಮು ಚಳಿ ಹೆಚ್ಚಾಗಿದೆ. ತರಕಾರಿ, ಸೊಪ್ಪು ಖರೀದಿಸುತ್ತಿದ್ದ ಗ್ರಾಹಕರು ಈಗ ಅವರೆ, ತೊಗರಿಕಾಯಿ ಖರೀದಿಸಲು ಮುಂದಾಗಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಅವರೆ, ತೊಗರಿಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಬೆಲೆ ಬಂದಿದೆ ಎಂದು ಆವರೆಕಾಯಿ ವ್ಯಾಪಾರಿ ಮಹೇಶ್ ಹೇಳುತ್ತಾರೆ.

ವಿಜಯಪುರ ಟೌನ್ ಹಾಲ್ ಸರ್ಕಲ್‍ನಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಅವರೆಕಾಯಿಯನ್ನು ಚೀಲಕ್ಕೆ ತುಂಬುತ್ತಿರುವುದು ವ್ಯಾಪಾರಿ.
ಸಂಕ್ರಾಂತಿ ಶಿವರಾತ್ರಿವರೆಗೂ ಕೊಯ್ಲು
ಸಾಮಾನ್ಯವಾಗಿ ಮುಂಗಾರಿನಲ್ಲಿ ರೈತರು ವಿವಿಧ ಬೆಳೆಗಳೊಂದಿಗೆ ಅವರೆ ತೊಗರಿ ಸಾಲುಗಳಲ್ಲಿ ಅಥವಾ ಬದುಗಳಲ್ಲಿ ಹಾಕುತ್ತಾರೆ. ಚಳಿಗಾಲದ ಸೀಸನ್‍ನಲ್ಲಿ ಕೊಯ್ಲಿಗೆ ಬರಲಿದೆ. ಸಂಕ್ರಾಂತಿ ಶಿವರಾತ್ರಿಯವರೆಗೂ ಕೊಯ್ಲು ನಡೆಯುತ್ತದೆ. ಈ ಬಾರಿ ಮಾರುಕಟ್ಟೆಗೆ ಅವರೆ ತೊಗರಿಕಾಯಿ ತಡವಾಗಿ ಬಂದಿದ್ದು ಬೇಡಿಕೆ ಹೆಚ್ಚಾಗಿದ್ದು ಬೆಲೆಯೂ ಉತ್ತಮವಾಗಿದೆ ಎಂದು ಆವರೆಕಾಯಿ ಬೆಳೆದ ರೈತ ಸುರೇಶ್ ಹೇಳುತ್ತಾರೆ.
ವಿವಿಧೆಡೆಯಿಂದ ಆಗಮನ
ವಿಜಯಪುರ ಪಟ್ಟಣದ ಮಾರುಕಟ್ಟೆಗೆ ಹೋಬಳಿಯ ಸ್ಥಳೀಯ ಭಾಗದ ರೈತರು ಮಾರುಕಟ್ಟೆಗೆ ತಂದ ನಾಟಿ ಅವರೆ ತೊಗರಿಕಾಯಿಯನ್ನು ವ್ಯಾಪರಸ್ಥರು ಖರೀದಿ ಮಾಡುತ್ತಿದ್ದಾರೆ. ಶುಕ್ರವಾರ ನಡೆದ ಸಂತೆಗೆ ಬೆಂಗಳೂರು ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಶಿಡ್ಲಘಟ್ಟ ಜಂಗಮಕೊಟೆ ದೇವನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಿಗಳು ತಂದು ಮಾರಾಟ ಮಾಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.