ADVERTISEMENT

ಏಡ್ಸ್‌ಗೆ ಮುನ್ನೆಚ್ಚರಿಕೆಯೇ ಮದ್ದು: ಡಾ.ಎಚ್.ಜಿ. ವಿಜಯ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 14:17 IST
Last Updated 1 ಡಿಸೆಂಬರ್ 2018, 14:17 IST
ದೊಡ್ಡಬಳ್ಳಾಪುರದ ಅರವಿಂದ ಐಟಿಐ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿದರು. ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಹಾಜರಿದ್ದರು
ದೊಡ್ಡಬಳ್ಳಾಪುರದ ಅರವಿಂದ ಐಟಿಐ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿದರು. ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಹಾಜರಿದ್ದರು   

ದೊಡ್ಡಬಳ್ಳಾಪುರ: ‘ಏಡ್ಸ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗವಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ. ವಿಜಯ ಕುಮಾರ್ ತಿಳಿಸಿದರು.

ನಗರದ ಅರವಿಂದ ಐಟಿಐ ಕಾಲೇಜಿನಲ್ಲಿ ಶ್ರೀರಾಮ 9 ಆರೋಗ್ಯ ಸೇವೆ ಹಾಗೂ ತರಬೇತಿ ಕೇಂದ್ರದ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಾದ್ಯಂತ ಹರಡಿರುವ ಈ ರೋಗ ಇದುವರೆಗೂ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದುವರೆಗೂ ಲಕ್ಷಗಟ್ಟಲೆ ಜನರು ಏಡ್ಸ್ ನಿಂದ ಮರಣ ಹೊಂದಿದ್ದಾರೆ. ನಮ್ಮ ತಾಲೂಕಿನಲ್ಲಿಯೂ ಸಹ ಶೇ 1ರಷ್ಟು ಪೀಡಿತರಿದ್ದಾರೆ ಎಂದರು.

ADVERTISEMENT

ಎಚ್ಐವಿ ವೈರಸ್‌ಗಳು ಬಿಳಿರಕ್ತ ಕಣಗಳ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ರೋಗಿಯು ನಿರಂತರ ಜ್ವರ, ಭೇದಿ, ಕೆಮ್ಮುಗಳಿಂದ ದೇಹದ ತೂಕ ಕಡಿಮೆಯಾಗುತ್ತಾ ಹೋಗುತ್ತಾನೆ. ರೋಗ ಲಕ್ಷಣಗಳು ಕಂಡು ಬರಲು 6 ತಿಂಗಳಿನಿಂದ 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಸಮಯ ತೆಗದುಕೊಳ್ಳಬಹುದು ಎಂದರು.

ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ, ಸುರಕ್ಷಿತ ಲೈಂಗಿಕತೆಗೆ ನಿರೋಧ್ ಬಳಸುವುದು. ಸೂಜಿ, ಸಿರಿಂಜ್ ಮತ್ತು ಇತರೆ ಉಪಕರಣಗಳನ್ನು ಸಂಸ್ಕರಿಸಿ ಉಪಯೋಗಿಸುವುದು, ಗರ್ಭಿಣಿಯರ ಎಚ್ಐವಿ ಪರೀಕ್ಷೆಯನ್ನು ಸ್ವಯಂ ಪ್ರೇರಿತವಾಗಿ ಐಸಿಟಿಸಿಯಲ್ಲಿ ಮಾಡಿಸಿಕೊಂಡು, ಸೋಂಕಿದ್ದಲ್ಲಿ ಪ್ರತಿಬಂಧಕ ಕ್ರಮಗಳನ್ನು ಅನುಸರಿಸುವುದು ಮೊದಲಾದ ಮುಂಜಾಗ್ರತೆ ವಹಿಸುವುದೇ ಸದ್ಯ ಈ ರೋಗದಿಂದ ಪಾರಾಗಲು ಇರುವ ವಿಧಾನವಾಗಿದೆ ಎಂದರು.

ಈ ಸೋಂಕು ಶೂನ್ಯ ಪ್ರಮಾಣಕ್ಕೆ ತಲುಪಲು ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಎಚ್ಐವಿ ಪತ್ತೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಪ್ಪಿಸಲು ಗರ್ಭಿಣಿಯರಿಗೆ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಹಾಗೂ ರೋಗ ಪೀಡಿತರಿಗೆ ಎ.ಆರ್.ಟಿ. ಕೇಂದ್ರಗಳಲ್ಲಿ ಚಿಕಿತ್ಸೆ ಮತ್ತು ಔಷಧ ಪಡೆಯಲು ಹೋಗಿ ಬರುವ ಪ್ರಯಾಣ ಭತ್ಯೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಏಡ್ಸ್ ಕುರಿತಂತೆ ಅರಿವು ಇಲ್ಲದಿರುವುದು ರೋಗ ಹರಡಲು ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಿ.ಎಸ್.ಶ್ರೀಕಂಠಮೂರ್ತಿ, ಮುಖಂಡರಾದ ಮರಿಯಪ್ಪ ನಟರಾಜ್, ಉಪನ್ಯಾಸಕಿ ಆಶಾ, ಶ್ರೀರಾಮ 9 ಆರೋಗ್ಯ ಸೇವೆ ಹಾಗೂ ತರಬೇತಿ ಕೇಂದ್ರದ ಮೇಲ್ವಿಚಾರಕರಾದ ಎಚ್.ವಿ.ಅನುಷಾ, ಬಿ.ತ್ರಿವೇಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.