
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ ನೀರು ಹರಿಸಲು ಹಾಗೂ ಮೆಟ್ರೊ ವಿಸ್ತರಣೆ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿ ಸಂಪುಟ ಸಭೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಇದಕ್ಕಾಗಿ ಒತ್ತಡ ಹಾಕುತ್ತಿದ್ದು, ಇದರ ಬಗ್ಗೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(ಬಯಪ)ದ ನೂತನ ಕಚೇರಿ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಚ್ ಮುನಿಯಪ್ಪ ಅವರು ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ಎತ್ತಿನಹೊಳೆ, ಕಾವೇರಿ ನೀರನ್ನು ಈ ಭಾಗಕ್ಕೆ ಕೊಡಲೇ ಹರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸಲಾಗವುದು ಎಂದರು.
‘ನಾನು ನೀರಾವರಿ ಸಚಿವ ಆದ ನಂತರ ಬೆಂಗಳೂರಿಗೆ ಆರು ಟಿಎಂಸಿ ನೀರನ್ನು ಪ್ರತ್ಯೇಕವಾಗಿ ಮೀಸಲಿಡಲು ಆದೇಶ ಮಾಡಿದ್ದೇನೆ. 2002 ರಿಂದ 2004ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರಚನೆಗೆ ಸಹಿ ಮಾಡಿದೆ. ಬಿಡದಿಯಲ್ಲಿ ಅಥವಾ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಆಗಬೇಕಾ ಎಂಬ ಚರ್ಚೆ ಆಗುತ್ತಿತ್ತು. ಆಗ ಮುಖಂಡರಾದ ಮುನಿನರಸಿಂಹಯ್ಯ, ರಾಮಯ್ಯ, ಬಚ್ಚೇಗೌಡ ಅವರು ಈ ಭಾಗದ ರೈತರನ್ನು ಒಪ್ಪಿಸಿ, ಇಲ್ಲಿ ವಿಮಾನ ನಿಲ್ದಾಣ ಆಗಬೇಕೆಂದು ತೀರ್ಮಾನಿಸಲಾಯಿತು ಎಂದು ನೆನೆದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಗೆ ಮೆಟ್ರೊ ರೈಲು ಸಂಪರ್ಕ, ಕಾವೇರಿ ನೀರು ಹಾಗೂ ಬಯಪ್ಪ ಪ್ರಾಧಿಕಾರಕ್ಕೆ ಅನುದಾನ ಕಲ್ಪಿಸುವಂತೆ ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದೇವನಹಳ್ಳಿಯೂ ಅಭಿವೃದ್ದಿ ಹೊಂದುತ್ತಿದ್ದು, ಕೈಗಾರಿಕೋದ್ಯಮ ಹೆಚ್ಚಾಗುತ್ತಿದೆ. ಇದರಿಂದ ದೇವನಹಳ್ಳಿಗೆ ಮೆಟ್ರೊ ಸಂಪರ್ಕ ಅಗತ್ಯ. ದೇವನಹಳ್ಳಿಗೆ ಮೆಟ್ರೊ ವಿಸ್ತರಣೆ ಮಾಡಲು ಬಜೆಟ್‌ನಲ್ಲಿ ಸೇರಿಸಲಾಗಿದೆ. ಆದಷ್ಟು ಬೇಗ ಇದನ್ನು ಅನುಷ್ಟಾನಗೊಳಿಸಲಾಗುವುದು ಎಂದರು.
ದೇವನಹಳ್ಳಿ, ವಿಜಯಪುರಕ್ಕೆ ಕಾವೇರಿ ಕುಡಿಯುವ ನೀರು ಕೊಡಬೇಕು. 100 ವರ್ಷ ಇತಿಹಾಸ ಇರುವ ದೇವನಹಳ್ಳಿ, ವಿಜಯಪುರ ಪುರಸಭೆಗೆ ಯುಜಿಡಿ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಶರತ್ ಕುಮಾರ್ ಬಚ್ಚೆಗೌಡ, ಎಸ್. ರವಿ, ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ರಾಜಣ್ಣ, ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಜಗನ್ನಾಥ್, ಬಯಪ ಆಯುಕ್ತರು ರಾಜೇಂದ್ರ ಪಿ. ಚೋಳನ್ ಉಪಸ್ಥಿತರಿದ್ದರು.
ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸುವ ಕೆಲಸ ಆದಷ್ಟು ಬೇಗ ಮಾಡಬೇಕು.– ಕೆ.ಎಚ್. ಮುನಿಯಪ್ಪ, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.