
ಪ್ರಜಾವಾಣಿ ವಾರ್ತೆ
ದೊಡ್ಡಬಳ್ಳಾಪುರ: ತಾಲ್ಲೂಕಿನ ವಿವಿಧೆಡೆ ಬಾಂಗ್ಲಾದೇಶದ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿ ವರದಿ ಹಿನ್ನೆಲೆಯಲ್ಲಿ ಶುಕ್ರವಾರ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್‌ಗೌಡ ಅವರು ನೇಕಾರ ಮುಖಂಡರ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ, ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ನೇಕಾರಿಕೆಗೆ ನೇಮಕವಾಗಿರುವ ಹೊರ ರಾಜ್ಯದವರ ಆಧಾರ್ ಕಾರ್ಡ್ ಹಾಗೂ ಇತರೆ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡುವಂತೆ ಸೂಚನೆ ನೀಡಿದರು. ಯಾವುದೇ ಅಹಿತಕರ ಘಟನೆ, ಕಾನೂನು ಬಾಹಿರ ಚಲನವಲನ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ನೇಕಾರ ಮುಖಂಡರಾದ ಬಿ.ಜಿ.ಹೇಮಂತ್‌ರಾಜ್, ಪಿ.ಎ.ವೆಂಕಟೇಶ್ ಮಾಹಿತಿ ನೀಡಿ, ಪೊಲೀಸ್ ಇಲಾಖೆಯ ಸೂಚನೆ ಪಾಲಿಸಲಾಗುವುದು. ಆದರೆ ಹಲವು ವರ್ಷಗಳಿಂದ ನೇಕಾರಿಕೆಯಲ್ಲಿ ಹೊರ ರಾಜ್ಯದವರು ಕೆಲಸ ಮಾಡುತ್ತಿದ್ದು, ಯಾವುದೇ ಅನುಮಾನಸ್ಪದ, ಕಾನೂನು ಉಲ್ಲಂಘನೆಯಂತ ಚಟುವಟಿಕೆಗಳು ಕಂಡು ಬಂದಿಲ್ಲ. ಈ ಕುರಿತಂತೆ ಕೆಲವರು ಕಪೋಕಲ್ಪಿತವಾಗಿ ವದಂತಿ ಹರಡುತ್ತಿದ್ದಾರೆ. ಆ ರೀತಿ ಆರೋಪ ಮಾಡುವ ಮುನ್ನ ದಾಖಲೆ ಪರಿಶೀಲನೆ ಮಾಡಬೇಕು. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಬೇಕು. ದುಡಿಯುವ ವರ್ಗದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಉತ್ತರ ಭಾರತದ ಎಲ್ಲಾ ರಾಜ್ಯದವರು ನಮ್ಮಲ್ಲಿ ಹಿಂದಿ ಮಾತನಾಡುತ್ತಾರೆ. ಹಾಗಾಗಿ ಎಲ್ಲರನ್ನು ಅನುಮಾನಿಸುವುದು ತಪ್ಪು. ಈ ಎಲ್ಲರನ್ನು ಇಲ್ಲಿಂದ ಹೋಗುವಂತೆ ಹೇಳಿದರೆ ನೇಕಾರಿಕೆ, ಕೃಷಿ, ಕಟ್ಟಡ ಕೆಲಸ ಸೇರಿದಂತೆ ಬಹುತೇಕ ಉದ್ಯಮಗಳು ಸ್ಥಗಿತವಾಗುವ ಅಪಾಯಗಳಿವೆ. ದಾಖಲೆ ಇಲ್ಲದೆ ವದಂತಿ ಹರಡುವವರ ವಿರುದ್ಧವು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
Cut-off box - ಸಭೆ ನಡೆಸಲು ಕಾರಣ ಗುರುವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಕವಾಗಿ ಹರಡಿಕೊಂಡಿದ್ದಾರೆ. ಇದು ಮುಂದೆ ಅತೀ ದೊಡ್ಡ ಸಮಸ್ಯೆಯಾದಿತು’ ಎಂದು ಕಳವಳ ವ್ಯಕ್ತಪಡಿಸಿ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು ‘ದೊಡ್ಡಬಳ್ಳಾಪುರ ನಗರದ ಕಾಲೇಜು ರಸ್ತೆಗಳಲ್ಲಿ ಹೋಟೆಲ್ ಬಳಿ ಮಾರುಕಟ್ಟೆ ಬಸ್ ನಿಲ್ದಾಣ ರೈಲ್ವೇ ನಿಲ್ದಾಣ ಕೈಗಾರಿಕಾ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುತ್ತಾರೆ. ಇದರಿಂದ ಆತಂಕಕ್ಕೆ ಕಾರಣವಾಗುತ್ತಿದೆ’ ಎಂದು ಪ್ರತಿಕ್ರಿಯೆ ಮಾಡಿದ್ದು ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.