ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ನಾಲ್ಕು ಆನೆಗಳು ಗುರುವಾರ (ಜುಲೈ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್‌ಗೆ ಪ್ರಯಾಣ ಮಾಡಲಿವೆ.
ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ಒಂದು ಗಂಡು ಹಾಗೂ ಮೂರು ಹೆಣ್ಣಾನೆ ತೆರಳಲಿವೆ. ಪ್ರತಿಯಾಗಿ ಜಪಾನ್‌ನಿಂದ ನಾಲ್ಕು ಚೀತಾ, ನಾಲ್ಕು ಪೂಮಾ (ಪರ್ವತ ಸಿಂಹ), ಮೂರು ಚಿಂಪಾಂಜಿ, ಎಂಟು ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟಕ್ಕೆ ಬರಲಿವೆ.
2021ರಲ್ಲಿ ಮೈಸೂರು ಮೃಗಾಲಯದ ಮೂರು ಆನೆಗಳನ್ನು ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ ಕಳುಹಿಸಲಾಗಿತ್ತು.
ಸುರೇಶ್ (8 ವರ್ಷ), ಗೌರಿ (9), ಶ್ರುತಿ (7) ಹಾಗೂ ತುಳಸಿ (5) ಆನೆಗಳು ಕತಾರ್ ಏರ್‌ವೇಸ್ ಸರಕು ಸಾಗಣೆ ವಿಮಾನ ಏರಲಿವೆ. ಇದಕ್ಕಾಗಿ ವಿಮಾನದ ಒಳಗಡೆ ವಿನ್ಯಾಸ ಬದಲಾವಣೆ ಮಾಡಲಾಗಿದೆ.
ಎಂಟು ತಾಸು ಪ್ರಯಾಣದ ನಂತರ ಜಪಾನ್‌ನ ಒಸಾಕಾದ ಕನ್ಸೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿವೆ. ಅಲ್ಲಿಂದ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ಕರೆದೊಯ್ಯಲಾಗುವುದು.
ವಿಮಾನ ಪ್ರಯಾಣ, ಆಹಾರ, ಹೊಸ ಪರಿಸರಕ್ಕೆ ಹೊಂದಾಣಿಕೆ ಕುರಿತು ಆರು ತಿಂಗಳಿನಿಂದ ಬನ್ನೇರುಘಟ್ಟದಲ್ಲಿ ಆನೆಗಳಿಗೆ ತರಬೇತಿ ನೀಡಲಾಗಿದೆ.
ನಾಲ್ಕೂ ಆನೆಗಳು ಆರೋಗ್ಯದಿಂದ ಇದ್ದು, ಬೀಳ್ಕೊಡುಗೆಗೆ ಉದ್ಯಾನದ ಸಿಬ್ಬಂದಿ ಸಿದ್ಧರಾಗಿದ್ದಾರೆ ಎಂದು ಉದ್ಯಾನದ ಪ್ರಕಟಣೆ ತಿಳಿಸಿದೆ.
* ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ವಿನಿಮಯ
* ಮೊದಲ ಬಾರಿಗೆ ಬನ್ನೇರುಘಟ್ಟ ಉದ್ಯಾನದ ಆನೆಗಳ ವಿನಿಮಯ
* ಬನ್ನೇರುಘಟ್ಟದಿಂದ ಜಪಾನ್ ಮೃಗಾಲಯದವರೆಗೆ ಒಟ್ಟು 20 ತಾಸು ಪ್ರಯಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.