ADVERTISEMENT

ಬಸವಣ್ಣ ಸಾವು ಆತ್ಮಹತ್ಯೆಯಲ್ಲ: ಡಾ.ಬಸವರಾಜ ಸಾದರ

ಕಾರ್ನಾಡ,ಕಂಬಾರರ ನಾಟಕಗಳನ್ನು ಅನುಲಕ್ಷಿಸಿ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:42 IST
Last Updated 5 ಏಪ್ರಿಲ್ 2019, 13:42 IST
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಪ್ರಶ್ನೆಗಳ ಮೂಲಕ ಪರ್ಯಾಯದತ್ತ ಪಯಣ’ ಉಪನ್ಯಾಸದ ಅಂಗವಾಗಿ ನಡೆದ ಚಿತ್ರಾವಳಿ ಪ್ರದರ್ಶನವನ್ನು ಲೇಖಕ ಡಾ.ಬಸವರಾಜ ಸಾದರ ಉದ್ಘಾಟಿಸಿದರು. ಕವಿ ಡಾ,ಸಿದ್ದಲಿಂಗಯ್ಯ ಇದ್ದರು
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಪ್ರಶ್ನೆಗಳ ಮೂಲಕ ಪರ್ಯಾಯದತ್ತ ಪಯಣ’ ಉಪನ್ಯಾಸದ ಅಂಗವಾಗಿ ನಡೆದ ಚಿತ್ರಾವಳಿ ಪ್ರದರ್ಶನವನ್ನು ಲೇಖಕ ಡಾ.ಬಸವರಾಜ ಸಾದರ ಉದ್ಘಾಟಿಸಿದರು. ಕವಿ ಡಾ,ಸಿದ್ದಲಿಂಗಯ್ಯ ಇದ್ದರು   

ಮಾಗಡಿ: ‘ಬಸವಣ್ಣ ಸಾವು ಸಹಜವಲ್ಲ. ಸತ್ಯ ಹೇಳಿದರೆ ನನ್ನ ಕೊಲೆಯಾಗಲಿದೆ. ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳುವಂತಹವರಲ್ಲ’ ಎಂದು ಲೇಖಕ ಡಾ.ಬಸವರಾಜ ಸಾದರ ಅವರು ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿ ವತಿಯಿಂದ ಶುಕ್ರವಾರ ನಡೆದ ಪ್ರಶ್ನೆಗಳ ಮೂಲಕ ಪರ್ಯಾಯದತ್ತ ಪಯಣ, ವಚನಕ್ರಾಂತಿ ಆಧಾರಿತ ಕಾರ್ನಾಡ ಮತ್ತು ಕಂಬಾರರ ನಾಟಕಗಳನ್ನು ಅನುಲಕ್ಷಿಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಬಸವಣ್ಣ ಅವರ ಸಾವಿನ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು.

‘ಬೌದ್ಧರ ವಿಶ್ವವಿದ್ಯಾಲಯ ಮತ್ತು ಜೈನರ ಸ್ಮಾರಕಗಳಿದ್ದ ಪವಿತ್ರ ಸ್ಥಳ ಕಲ್ಯ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಕವಿ ಡಾ.ಸಿದ್ದಲಿಂಗಯ್ಯ ಆಗ್ರಹಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಮಾಗಡಿ ನನ್ನ ತವರೂರು. ಮರಳಿ ಬಂದು ಇಲ್ಲಿಯೇ ನೆಲೆಸುವ ಆಸೆ ಇದೆ. ವಿದ್ವಾಂಸರ ತವರೂರಿನ ಸ್ಮಾರಕಗಳೆಲ್ಲವನ್ನು ಅಭಿವೃದ್ಧಿಪಡಿಸಬೇಕಿದೆ. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ, ಕಲ್ಯದಲ್ಲಿದ್ದ ಸರ್ವಶೀಲೆ ಚನ್ನಮ್ಮ ಅವರ ದರ್ಶನಕ್ಕೆ ದೂರದ ಆಂಧ್ರಪ್ರದೇಶದಿಂದ ಬಂದ ಪಾಲ್ಕುರಿಕೆ ಸೋಮನಾಥನ ಸಮಾಧಿಯೂ ಅಭಿವೃದ್ದಿಯಾಗಿಲ್ಲ’ ಎಂದರು.

‘ಕಾಳಿದಾಸ ಬಿರುದಾಂಕಿತ ಸಾತನೂರಿನ ಫಂಡರೀಕ ವಿಠ್ಠಲ, ಸಂಸ್ಕೃತ ವಿದ್ವಾಂಸರು ವಾಸವಾಗಿದ್ದ ಮೋಟಗೊಂಡನಹಳ್ಳಿ, ಸಾವನದುರ್ಗ ಮತ್ತು ಸಂಕೀಘಟ್ಟದ ವರ್ಧಮಾನ ಬಸದಿ ಹಾಗೂ ಹುಳ್ಳೇನಹಳ್ಳಿ, ಬಿಸ್ಕೂರು ಮತ್ತು ಕೆಂಪೇಗೌಡರ ಸ್ಮಾರಕಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ. ಅಗತ್ಯಬಿದ್ದರೆ ಮುಖ್ಯಮಂತ್ರಿ ಭೇಟಿ ಮಾಡುವೆ’ ಎಂದು ತಿಳಿಸಿದರು.

ಬಂಡಾಯ: ‘ಪುಟ್ಟಣ್ಣ ಕಣಗಾಲ್ ಅವರ ಒತ್ತಾಸೆಯಂತೆ ‘ಆದಿತ್ಯ’ ಕಾವ್ಯನಾಮದ ಮೂಲಕ ‘ಗೆಳತಿ, ಓ ಗೆಳತಿ’ ಚಿತ್ರಗೀತೆ ಬರೆದುಕೊಟ್ಟೆ. ಗೀತೆಗೆ ಬಹುಮಾನ ಪ್ರಕಟವಾಯಿತು. ಪ್ರಶಸ್ತಿ ಪಡೆಯಲು ಹೋದಾಗ ಬಂಡಾಯಗಾರರು ನನ್ನನ್ನು ಟೀಕಿಸಿದರು. ಕ್ರಾಂತಿಕಾರಿಯಾದ ನೀವು ಪ್ರೇಮಗೀತೆ ಬರೆದು ನಮಗೆಲ್ಲರಿಗೂ ಅವಮಾನ ಮಾಡಿದ್ದೀರಿ? ಎಂದರು. ಅವರೆಲ್ಲರ ಕ್ಷಮೆ ಕೋರಿದೆ ಎಂದು ಹಳೆ ನೆನ‍‍ಪುಗಳನ್ನು ಮೆಲುಕು ಹಾಕಿದರು.

ಸಾಹಿತ್ಯ ಅಕಾಡೆಮಿ ಸದಸ್ಯೆ ಪದ್ಮಿನಿ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಎಚ್.ಆರ್.ಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥಿ ಪಿ.ನಂಜುಂಡ, ಎಸ್‌.ಮಂಜುನಾಥ, ದಲಿತ ಸಂಘರ್ಷ ಸಮಿತಿ ಸಂಚಾಲಕ ಗಂಗಾಧರ್‌, ಪ್ರೊ.ಚಲುವರಾಜು, ಪ್ರೊ.ರೂಪಶ್ರೀ, ಸುಷ್ಮಾ, ಕನ್ನಡ ಭಾಷಾ ವಿಭಾಗದ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.