ADVERTISEMENT

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಮೊದಲ ಚುನಾವಣೆ ಕುತೂಹಲ

ತ್ರಿಕೋನ ಸ್ಪರ್ಧೆ l ಪ್ರತಿಷ್ಠೆಯ ಕಣ lಗರಿಗೆದರಿದ ರಾಜಕೀಯ ಚಟುವಟಿಕೆ

ನಟರಾಜ ನಾಗಸಂದ್ರ
Published 13 ಡಿಸೆಂಬರ್ 2025, 1:54 IST
Last Updated 13 ಡಿಸೆಂಬರ್ 2025, 1:54 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ   

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಮೊಟ್ಟಮೊದಲ ಬಾರಿಗೆ ಬಾಶೆಟ್ಟಿಹಳ್ಳಿ ಮೊದಲ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಜ್ಜಾಗಿದೆ. ಚುನಾವಣಾ ಫಲಿತಾಂಶ ತಾಲ್ಲೂಕಿನ ರಾಜಕೀಯ ಪಕ್ಷಗಳಲ್ಲಿ ಹಲವು ಕಾರಣಗಳಿಂದ ಬಾರಿ ಕುತೂಹಲ ಮೂಡಿಸಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ 2ನೇ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಹೊಂದಿದ್ದ ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ 47 ಸದಸ್ಯರು ಇದ್ದರು. ಕೈಗಾರಿಕಾ ಪ್ರದೇಶ ಹೊಂದಿರುವ ಇಲ್ಲಿ ಸಹಜವಾಗಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹ, ಬಜೆಟ್‌ ಮಂಡನೆಯು ನಡೆಯುತಿತ್ತು. ಇಲ್ಲಿನ ಗ್ರಾಮ ಪಂಚಾಯಿತಿ ಸರ್ಕಾರದ ಯಾವುದೇ ಅನುದಾನ ಇಲ್ಲದೆ ಸ್ವಂತ ತೆರಿಗೆ ಹಣದಲ್ಲಿ ಒಳಚರಂಡಿ ಸೌಲಭ್ಯ ಕಲ್ಪಿಸಿಕೊಂಡಿತ್ತು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದರಿಂದ ರಾಜ್ಯ ಸರ್ಕಾರದಿಂದ ನೀಡಲಾಗುವ ಗಾಂಧಿ ಸ್ವಚ್ಛ ಗ್ರಾಮ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ  ಪಡೆದಿದೆ. ಈಗ ಮೊದಲ ಪಟ್ಟಣ ಪಂಚಾಯಿತಿ ಚುನಾವಣೆ ಎದುರಿಸುತ್ತಿದೆ. 19 ವಾರ್ಡ್‌ಗಳಿಗೆ ಸ್ಪರ್ಧೆ ನಡೆಯಲಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಪ್ರತಿಷ್ಠೆ ಕಣ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ 12,500 ಮತದಾರರನ್ನು ಹೊಂದಿದೆ. ಹಾಗಾಗಿ ಇಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿಗೂ ಸಹಕಾರಿಯಾಗಲಿದೆ. ಅಲ್ಲದೆ ಇದೇ ಡಿಸೆಂಬರ್‌ 31ಕ್ಕೆ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದು, 2026ರ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿವೆ. ಈ ಎಲ್ಲಾ ಕಾರಣದಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವುದು ಮೂರು ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಚುನಾವಣೆಯಾಗಿ ಪರಿಣಮಿಸಿದೆ.

ADVERTISEMENT

ಮೈತ್ರಿಗೆ ಮೂಡದ ಒಮ್ಮತ: ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌, ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟ ನಂತರ ಸಹಜವಾಗಿಯೇ ತಾಲ್ಲೂಕಿನ ಮಟ್ಟಿಗೂ ಮೈತ್ರಿ ಅನಿವಾರ್ಯಗಿತ್ತು. ಇದೇ ಕಾರಣಕ್ಕೆ ಬಮೂಲ್‌ ಹಾಗೂ ಟಿಎಪಿಎಂಸಿಎಸ್‌ ಚುನಾವಣೆಯಲ್ಲಿ ಶಾಸಕ ಧೀರಜ್‌ ಮುನಿರಾಜು, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ನಾಲ್ಕು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿರುವ ಬಿ.ಮುನೇಗೌಡ ಅವರು ಮೈತ್ರಿ ಮಾಡಿಕೊಂಡು ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡಿದ್ದರು. ಆದರೆ ಎರಡೂ ಚುನಾವಣೆಯಲ್ಲೂ ಮೈತ್ರಿ ಮುರಿದು ಬಿತ್ತು. ಅದರಲ್ಲೂ ಟಿಎಪಿಎಂಸಿಎಸ್‌ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಡರಲ್ಲಿನ ಒಳಜಗಳದಿಂದ ಒಮ್ಮತ ಮೂಡದ ಮೈತ್ರಿ ತೀವ್ರಮುಖಭಂಗ ಅನುಭವಿಸಿತು. ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಟಿಎಪಿಎಂಸಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಟಿಎಪಿಎಂಸಿಎಸ್‌ ಮೈತ್ರಿ ಚುನಾವಣೆಯ ಕಹಿ ಅನುಭವದಿಂದ ಬಿಜೆಪಿ ಮುಖಂಡರು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಮೈತ್ರಿಗೆ ಮುಂದಾಗದೇ ಎಲ್ಲಾ 19 ವಾರ್ಡ್‌ಗಳಿಗೂ ತನ್ನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್‌ ಪಕ್ಷ ಸಹ 19 ವಾರ್ಡ್‌ಗಳಿಗೂ ನಾಮಪತ್ರ ಸಲ್ಲಿಸಿದೆ. 12 ವಾರ್ಡ್‌ಗಳಿಗೆ ಮಾತ್ರ ಜೆಡಿಎಸ್‌ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.

ಮೊದಲ ಅಧ್ಯಕ್ಷರು ಎನಿಸಿಕೊಳ್ಳಲು ಕಸರತ್ತು
ವಾರ್ಡ್‌ಗಳಿಗೆ ಮೀಸಲಾತಿ ನಿಗದಿಯಾದಾಗಲೇ ಅಧ್ಯಕ್ಷ ಸ್ಥಾನ ಎಸ್‌.ಟಿ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಬಿಸಿಎಂ’ಎ’ ಅಭ್ಯರ್ಥಿಗೆ ಮೀಸಲಾಗಿದೆ. ಹಾಗಾಗಿ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಇದೇ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಮೊದಲ ಅಧ್ಯಕ್ಷ ಅನ್ನಿಸಿಕೊಳ್ಳುವುದಕ್ಕೆ ಅಭ್ಯರ್ಥಿಗಳು ಗೆಲುವಿಗಾಗಿ ಈಗಿನಿಂದಲೇ ನಾನಾ ರೀತಿಯ ಕಸರತ್ತು ಪ್ರಾರಂಭಿಸಿದ್ದಾರೆ.
ದೇಶದ ಪ್ರಮುಖ ಕೈಗಾರಿಕಾ ಪ್ರದೇಶ
202-26ನೇ ಸಾಲಿಗೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ₹35 ಕೋಟಿ ಬಜೆಟ್‌ ಮಂಡನೆಯಾಗಿದೆ. ಇದರಲ್ಲಿ ₹13 ಕೋಟಿ ತೆರಿಗೆಯೇ ಸಂಗ್ರಹವಾಗಿದೆ. 80ರ ದಶಕದಲ್ಲೇ ಪ್ರಥಮ ಬಾರಿಗೆ ಕೈಗಾರಿಕಾ  ಪ್ರದೇಶ ಇಲ್ಲೇ ಸ್ಥಾಪನೆಯಾಗಿತ್ತು. ಈ ಪ್ರದೇಶದಲ್ಲಿ ರಾಜ್ಯಕ್ಕೆ ಪ್ರಥಮ ಬಾರಿಗೆ ಕೇಂದ್ರದಲ್ಲಿ ಜವಳಿ ಸಚಿವರಾಗಿದ್ದ ಆರ್‌.ಎಲ್‌.ಜಾಲಪ್ಪ ಅವರು ಜವಳಿ ಪಾರ್ಕ್‌ ಸ್ಥಾಪನೆ ಮಾಡಿದ್ದಾರೆ. ವಿಶ್ವದರ್ಜೆಯ ಕನ್ನಡಕಗಳ ಗ್ಲಾಸ್‌ಗಳು ಜೀನ್ಸ್‌ ಪ್ಯಾಂಟ್‌ಗಳು ಇಲ್ಲಿ ತಯಾರಾಗುತ್ತಿವೆ. ದೇಶ ವಿದೇಶಗಳ ಲಕ್ಷಾಂತರ ಜನ ಇಲ್ಲಿನ ವಿವಿಧ ಗಾರ್ಮೆಂಟ್ಸ್‌ ಹಾಗೂ ಇತರೆ ಕೈಗಾರಿಕೆಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಾಶೆಟ್ಟಿಹಳ್ಳಿ ಈಗ ದೇಶದ ಪ್ರಮುಖ ಕೈಗಾರಿಕಾ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.
ಜೆಡಿಎಸ್‌ ಕೋಟೆ ಚಿದ್ರ
ಜೆಡಿಎಸ್‌ ಪಕ್ಷದ ಭದ್ರಕೋಟೆಯಾಗಿತ್ತು. ನಾರಾಯಣಸ್ವಾಮಿ ಬಿ.ಕೃಷ್ಣಪ್ಪ ಮುನಿರಾಜಪ್ಪ ಸೇರಿದಂತೆ ಹಲವಾರು ಜನ ಮುಖಂಡರು ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಅಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದರು. ತಾಲ್ಲೂಕಿನಲ್ಲಿ ನಡೆದ ರಾಜಕೀಯ ಧ್ರುವೀಕರಣದಿಂದ ಮೊದಲಿಗೆ ನಾರಾಯಣಸ್ವಾಮಿ ಈಗ ಬಿ.ಕೃಷ್ಣಪ್ಪ ಮುನಿರಾಜಪ್ಪ ಸೇರಿದಂತೆ ಹಲವಾರು ಜನ ಜೆಡಿಎಸ್‌ ತೊರೆದು ಶಾಸಕ ಧೀರಜ್‌ ಮುನಿರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಕಾರಣದಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಿಗೆ ಮಾತ್ರ ಜೆಡಿಎಸ್‌ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.