ADVERTISEMENT

ಬಿಬಿಎಂಪಿ ತ್ಯಾಜ್ಯ: ಕಸದ ರಾಜಕಾರಣಕ್ಕೆ ಆಕ್ರೋಶ

ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ರಾಶಿ ಹಾಕಲಾಗುತ್ತಿದೆ.

ಎನ್.ಎಂ.ನಟರಾಜ ನಾಗಸಂದ್ರ
Published 1 ಮೇ 2023, 4:56 IST
Last Updated 1 ಮೇ 2023, 4:56 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಪ್ರತಿ ದಿನ ಸಾಲಾಗಿ ಬರುವ ಲಾರಿಗಳು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಪ್ರತಿ ದಿನ ಸಾಲಾಗಿ ಬರುವ ಲಾರಿಗಳು (ಸಂಗ್ರಹ ಚಿತ್ರ)   

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ರಾಶಿ ಹಾಕಲಾಗುತ್ತಿದೆ. ಇದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಗಂಭೀರವಾಗಿ ಮಾತನಾಡದವರು ಚುನಾವಣಾ ದಿನಾಂಕ ಸಮೀಪವಾಗುತ್ತಿದಂತೆ ಕಸದ ರಾಶಿಗೆ ಅಡಿಪಾಯ ಹಾಕಿದವರೇ ಕಸದ ಮೂಲಕ ರಾಜಕಾರಣ ಮಾಡಲು ಹೋರಟಿರುವ ಬಗ್ಗೆ ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ಭಾಗದ ಜನರಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.

ಈ ದಿನಕ್ಕೂ ಸಹ ಚಿಗರೇನಹಳ್ಳಿರ ಸಮೀಪದ ಬಿಬಿಪಿಎಂ ಕಸ ವಿಲೇವಾರಿ ಘಟಕದಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸದಿಂದ ಬರುತ್ತಿರುವ ದುರ್ನಾತ, ಕಸದ ರಾಶಿಯಿಂದ ಹೊರ ಬರುವ ಕಲುಷಿತ ನೀರು ಅಂತರ್ಜಲ ಸೇರಿ ಉಂಟಾಗುತ್ತಿರುವ ನಾನಾ ರೀತಿಯ ಚರ್ಮ ರೋಗ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಯಾವುದೇ ಪಕ್ಷದ ಮುಖಂಡರು ಬಿಬಿಎಂಪಿ ಕಸದ ಸಮಸ್ಯೆ ಕುರಿತು ಮಾತನಾಡಿದರೆ ಅಸಹ್ಯ ಪಡುವಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ.

ಬಿಬಿಪಿಎಂ ವ್ಯಾಪ್ತಿಯಲ್ಲಿ ಪ್ರತಿ ದಿನ ಸಂಗ್ರಹವಾಗುವ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ನೆಪದಲ್ಲಿ 2006ರಲ್ಲಿ ಈ ಭಾಗದ ರಿಯಲ್‌ ಎಸ್ಟೇಟ್‌ ಏಜನ್ಸಿಗಳು ಪ್ರಥಮ ಬಾರಿಗೆ ಗುಂಡ್ಲಹಳ್ಳಿ ಸಮೀಪ ರೈತರಿಗೆ ಉತ್ತಮ ಬೆಲೆ ಕೊಡಿಸುವ ಮೂಲಕ ಭೂಮಿ ಖರೀದಿಸಿ ಟೆರ್ರಾ ಫಾರಂ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರು. ಆದರೆ ಕಸವಿಲೇವಾರಿ ಘಟಕ ದಿನ ಕಳೆದಂತೆ ಈ ಭಾಗದ ಜನರ ಪಾಲಿನ ಮೃತ್ಯು ಕೂಪವಾಗಿ ಕಾಡಲಾರಂಭಿಸಿತ್ತು. ಇದರ ವಿರುದ್ಧ ಸಿಡಿದೆದ್ದ ಸ್ಥಳೀಯ ಜನ 2014ರಲ್ಲಿ ಟೆರ್ರಾ ಫಾರಂ ಬಂದ್‌ ಮಾಡಿಸುವಲ್ಲಿ ಸಫಲರಾದರು.

ADVERTISEMENT

ಆದರೆ ಬಾಣಲೆಯಿಂದ ಬೆಂಕಿಗೆ ಜಿಗಿದಂತೆ ಟೆರ್ರಾ ಫಾರಂ ಘಟಕ ಬಂದ್‌ ಮಾಡುವ ಸಂದರ್ಭದಲ್ಲೇ ಸಮೀಪದ ಚಿಗರೇನಹಳ್ಳಿ ಗ್ರಾಮದಲ್ಲಿ ಜಪಾನ್‌ ಮಾದರಿಯ ಆಧುನಿಕ ಯಂತ್ರಗಳನ್ನು ಬಳಸಿಕೊಂಡು ಕಸವನ್ನು ಉತ್ತಮ ಗೊಬ್ಬರವಾಗಿಸುವ ಮೂಲಕ ರೈತರಿಗೆ ನೆರವಾಗುವ ನೆಪದಲ್ಲಿ 2015ರಲ್ಲಿ ಎಂಎಎಸ್‌ಜಿಪಿ ಕಸ ವಿಲೇವಾರಿ ಘಟಕ ಪ್ರಾರಂಭವಾಯಿತು.

ಈ ಘಟಕದ ಪ್ರಾರಂಭವಾದ ಎರಡೇ ವರ್ಷಕ್ಕೆ ಅಂರ್ತಜಲ ಸೇರಿದಂತೆ ಸುತ್ತಮುತ್ತಲಿನ ಪರಿಸರ್ ಹಾನಿ ಹಂತ ಹಂತವಾಗಿ ಆರಂಭವಾಯಿತು. ಕಸದ ರಾಶಿ ಸಮೀಪದ ತಣ್ಣೀರನಹಳ್ಳಿ ಗ್ರಾಮದ ರೈತರ ಕೊಳವೆ ಬಾವಿಗಳಲ್ಲಿ ರಾಸಾಯನಿಕ ಯುಕ್ತ ನೀರು ಬರಲಾರಂಭಿಸಿ ಅಡಿಕೆ, ಬಾಳೆ ತೋಟಗಳು ಒಣಗಿದವು. ಕುಡಿಯುವ ನೀರಿಗೂ ತತ್ವವಾರ ಇಂದಿಗೂ ತಪ್ಪಿಲ್ಲ.

2006ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿಧಾನ ಸೌಧದಲ್ಲೇ ಹತ್ತಾರು ಸುತ್ತುಗಳ ಮಾತುಕತೆಗಳು ನಡೆದಿವೆ. ಪ್ರತಿ ಬಾರಿ ಸಭೆಗಳು ನಡೆದಾಗಲೂ ಸಮಸ್ಯೆ ಬಗೆಹರಿಸುವ ಭರವಸೆಗಳು ದೊರೆಯುತ್ತಿವೆ. ಹೊರತು ಜಾರಿಗೆ ಮಾತ್ರ ಬಂದಿಲ್ಲ.

ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದಾಗಿ ಚರ್ಮ ರೋಗಕ್ಕೆ ತುತ್ತಾಗಿರುವ ತಣ್ಣೀರನಹಳ್ಳಿ ಗ್ರಾಮದ ಮಹಿಳೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಬಿಬಿಎಂಪಿ ಕಸದ ರಾಶಿಯಿಂದ ಹೊರ ಬಂದಿರುವ ಕಲುಷಿತ ನೀರು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಬಂದಿರುವ ಬೃಹತ್‌ ಕಸದ ರಾಶಿ(ಸಂಗ್ರಹ ಚಿತ್ರ)
ಕಾನೂನು ಸಮರಕ್ಕೆ ಸಿದ್ಧ ‘ಬಿಬಿಎಂಪಿ ಕಸದ ರಾಶಿ ಇಲ್ಲಿಗೆ ಬಂದು ಬೀಳಲು ಅಡಿಪಾಯ ಹಾಕಿದವರೇ ಇಂದು ಹೆಚ್ಚು ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ನೀಡದಂತಾಗಿದ್ದಾರೆ. ಕಾನೂನು ಸಮರವೊಂದಿ ಕಸದ ಸಮಸ್ಯೆ ಪರಿಹಾರಕ್ಕೆ ಇರುವ ಏಕೈಕ ಮಾರ್ಗ ಎನ್ನುವ ಸತ್ಯವನ್ನು ಅರಿತುಕೊಂಡಿದ್ದಾರೆ. ಕಸದ ರಾಶಿಯಲ್ಲಿ ಮೂರು ಪಕ್ಷಗಳದ್ದು ಸಮಪಾಲಿದೆ. ಯಾರನ್ನೂ ದೂರಿದರು ಉಪಯೋಗ ಇಲ್ಲ’ ಎಂದು ಪರಿಸರ ಕಾಳಜಿಯ ಹೋರಾಟಗಾರ ದಿವಾಕರ್‌ ತಿಳಿಸಿದರು. ರಾಜಕೀಯ ಲಾಭದ ಸತ್ಯ ಅರಿವಾಗಿದೆ ಕಸ ವಿಲೇವಾರಿ ಘಟಕ ಮುಚ್ಚಿಸುವ ಹಾಗೂ ಬೃಹತ್‌ ಕಸದ ರಾಶಿಯಿಂದ ಈ ಭಾಗದ ಜನ ಜಾನುವಾರುಗಳಿಗೆ ಆಗುತ್ತಿರುವ ತೊಂದರಗಳನ್ನು ತಪ್ಪಿಸುವ ಸಲುವಾಗಿ ವಿವಿಧ ಮುಖಂಡರು ನಡೆಸಿದ ಹೋರಾಟಗಳು ರಾಜಕೀಯ ಲಾಭಕ್ಕಾಗಿಯೇ ಹೊರತು ಸಮಸ್ಯೆ ಪರಿಹರಿಸುವುದಕ್ಕಾಗಿ ಅಲ್ಲ ಎನ್ನುವ ‘ಸತ್ಯದ’ ಅರಿವಾಗಿದೆ. ಸ್ಥಳೀಯ ಜನ ಹೋರಾಟದ ಬಗ್ಗೆ ಇದ್ದ ಆಸಕ್ತಿ ಕಳೆದುಕೊಂಡಿದ್ದಾರೆ. ಸಮಸ್ಯೆ ಮಾತ್ರ ಹಾಗೆಯೇ ಮುಂದುವರೆದಿದೆ. ಜನ ಜಾನುವಾರುಗಳ ಮೂಕ ರೋಧನೆ ಮುಂದುವರೆದೇ ಇದೆ. ಮೂರು ಪಕ್ಷದ ಮುಖಂಡರು ಪ್ರಚಾರ ಸಭೆಗಳಲ್ಲಿ ಕಸದ ಸಮಸ್ಯೆ ಕುರಿತು ಭಾಷಣ ಮಾಡುವ ನೈತಿಕಯನ್ನೇ ಕಳೆದುಕೊಂಡಿದ್ದಾರೆ ಸಾಮಾಜಿಕ ಕಾರ್ಯಕರ್ತ ಕಾರ್ತಿಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.