ADVERTISEMENT

ಕರಡಿ ದಾಳಿ: ಏಳು ಜನರಿಗೆ ಗಾಯ - ಸೆರೆ ಹಿಡಿಯಲು ಹರಸಾಹಸ

ಬನ್ನೇರುಘಟ್ಟದಿಂದ ತಪ್ಪಿಸಿಕೊಂಡಿದ್ದ ಕರಡಿ ನಡುರಾತ್ರಿ ಪ್ರತ್ಯಕ್ಷ್ಯ l ಗ್ರಾಮಸ್ಥರ ಭೀತಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 3:52 IST
Last Updated 31 ಮಾರ್ಚ್ 2021, 3:52 IST
ಕಾಚನಾಯಕನಹಳ್ಳಿಯ ಬಳಿ ಸಿಸಿಟಿವಿಯೊಂದರಲ್ಲಿ ಪತ್ತೆಯಾಗಿರುವ ಕರಡಿ
ಕಾಚನಾಯಕನಹಳ್ಳಿಯ ಬಳಿ ಸಿಸಿಟಿವಿಯೊಂದರಲ್ಲಿ ಪತ್ತೆಯಾಗಿರುವ ಕರಡಿ   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಭಾನುವಾರ ತಪ್ಪಿಸಿಕೊಂಡಿದ್ದ ಕರಡಿ ಮಂಗಳವಾರ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಏಳಕ್ಕೂ ಹೆಚ್ಚು ಜನರನ್ನು ಪರಚಿ ಗಾಯಗೊಳಿಸಿದೆ.

ಮಹಿಳೆ, ವೃದ್ಧ, ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್‌ ಸೇರಿದಂತೆ ಏಳು ಜನರು ಗಾಯಗೊಂಡಿದ್ದು, ಬನ್ನೇರುಘಟ್ಟದ ಉದ್ಯಾನದ ಸುತ್ತಮುತ್ತ ಕರಡಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಮಂಗಳವಾರ ಬೆಳಗಿನ ಜಾವ 3ಗಂಟೆಗೆ ಕಾಚನಾಯಕನಹಳ್ಳಿ ಕಾರ್ಖಾನೆಯೊಂದರ ಬಳಿ ಕಾಣಿಸಿಕೊಂಡ ಕರಡಿ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿದೆ. ಕರಡಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ ದಾಟಿ ಚಂದಾಪುರದ ಕೆಇಬಿ ಕಚೇರಿ ಬಳಿ ಕೆಲಹೊತ್ತು ಸುತ್ತಾಡಿದ ಬಳಿಕ ಶೆಟ್ಟಿಹಳ್ಳಿಯಲ್ಲಿ ನಾಲ್ವರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ಬೆಳಗಿನ ಜಾವ ತಟ್ನಹಳ್ಳಿಯಲ್ಲಿ ನಾರಾಯಣರೆಡ್ಡಿ ಎಂಬ ವೃದ್ಧ ಮತ್ತು ಬಿಹಾರ ಮೂಲದ ಸುಹಾಲ್‌ ಎಂಬುವರನ್ನು ಕಚ್ಚಿ ಗಾಯಗೊಳಿಸಿದೆ. ಇಲ್ಲಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕರಡಿ ಕಾಣಿಸಿಕೊಂಡಿದೆ. ತಕ್ಷಣ ಇಲಾಖೆಯ ಆರು ತಂಡ ತಟ್ನಹಳ್ಳಿ, ಮಾಯಸಂದ್ರ, ಸಮಂದೂರು, ಶೆಟ್ಟಿಹಳ್ಳಿ ಸೇರಿದಂತೆ ವಿವಿಧ ಕಡೆ ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿವೆ. ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ಗಣೇಶ್‌, ವೈದ್ಯಾಧಿಕಾರಿ ಡಾ.ಉಮಾಶಂಕರ್‌, ಡಾ.ಮಂಜುನಾಥ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದ ಬಳಿ ಸಂರಕ್ಷಿಸಿ ಕರಡಿಯನ್ನು ಭಾನುವಾರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಬೋನಿನಿಂದ ಸ್ಥಳಾಂತರಿಸುವ ವೇಳೆ ಚಾಲಾಕಿ ಕರಡಿ ತಪ್ಪಿಸಿಕೊಂಡಿತ್ತು.

ಉದ್ಯಾನದ ಸಿಬ್ಬಂದಿ ಸುತ್ತಮುತ್ತ ಕರಡಿಯನ್ನು ಹುಡುಕುವ ಪ್ರಯತ್ನ ನಡೆಸಿದ್ದರು. ಆದರೆ, ಕರಡಿಯ ಸುಳಿವು ದೊರೆತಿರಲಿಲ್ಲ. ಬನ್ನೇರುಘಟ್ಟ ಸುತ್ತಮುತ್ತ ಗ್ರಾಮಗಳಲ್ಲಿ ಸೋಮವಾರ ಕೈಗೊಂಡ ಕರಡಿ ಶೋಧ ಕಾರ್ಯಾಚರಣೆ ಫಲ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.