
ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸವಾಲು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಬುಧವಾರ 62 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ. ಇದರಿಂದಾಗಿ ಬೆಂಗಳೂರಿನಿಂದ ವಿವಿಧೆಡೆ ತೆರಳಲು ಸಿದ್ಧರಾಗಿದ್ದ ಪ್ರಯಾಣಿಕರು ಟರ್ಮಿನಲ್–2ರಲ್ಲಿಯೇ ಕಾಯುವ ಅನಿವಾರ್ಯತೆಗೆ ಸಿಲುಕಿದರು. ಇದರ ಪರಿಣಾಮ ಕಿಕ್ಕಿರಿದ ಜನಸಂದಣಿ ಇತ್ತು.
‘ವಿಮಾನ ನಿಲ್ದಾಣದಲ್ಲಿ ದಟ್ಟಣೆ, ತಾಂತ್ರಿಕ ಸಮಸ್ಯೆ ಮತ್ತು ಕಾರ್ಯಾಚರಣೆ ಅಗತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಿಂದ ಇಂಡಿಗೊ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಮತ್ತು ಕೆಲವು ಸೇವೆಗಳು ರದ್ದಾಗಿವೆ’ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 31 ಇಂಡಿಗೊ ವಿಮಾನಗಳು ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆ ಹೊರಡಬೇಕಿದ್ದ 31 ವಿಮಾನಗಳು ರದ್ದಾಗಿವೆ. ಈ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡದ ಕಾರಣ ಟರ್ಮಿನಲ್‌ಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜುಗಳೊಂದಿಗೆ ಕಿಕ್ಕಿರಿದು ನಿಂತಿದ್ದ ದೃಶ್ಯ ಕಂಡು ಬಂದಿತು.
ಪ್ರಯಾಣಿಕರು ಬೋರ್ಡಿಂಗ್ ಪಾಸ್ ಪಡೆಯಲು ಬಂದಾಗ, ವಿಮಾನ ಸೇವೆ ರದ್ದಾಗಿರುವ ವಿಚಾರವನ್ನು ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರ ಗುಂಪು, ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತಾ ತಪಾಸಣೆಗೆ ಒಳಗಾದಾಗ ವಿಮಾನ ಹಾರಾಟ ವಿಳಂಬವಾಗಲಿದೆ ಎಂದು ಸಿಬ್ಬಂದಿ ತಿಳಿಸಿದರು. ಆ ಬಳಿಕ ಕೊನೆಗೆ ವಿಮಾನ ರದ್ದಾಗಿದೆ ಎಂದು ಸಿಬ್ಬಂದಿ ಘೋಷಿಸಿದರು ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.
ವಿವಿಧ ಕಾರಣಗಳಿಂದ ವಿಮಾನಯಾನ ರದ್ದಾಗಿರುವ ಕಾರಣ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್‌ನ ಪೂರ್ಣ ಪ್ರಮಾಣದ ಹಣ ಮರು ಪಾವತಿ ಮಾಡಲಾಗುವುದು ಎಂದು ಇಂಡಿಗೊ ಸಂಸ್ಥೆಯು ಪ್ರಯಾಣಿಕರಿಗೆ ಸಂದೇಶ ರವಾನಿಸಿದೆ.
ಏರ್‌ಬಸ್ ಎ–320 ಸರಣಿ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತೀವ್ರವಾದ ಸೌರ ವಿಕಿರಣಗಳು ಈ ಸರಣಿಯ ವಿಮಾನದಲ್ಲಿರುವ ಪ್ರಮುಖ ದತ್ತಾಂಶವನ್ನು ಹಾನಿಗೊಳಿಸುತ್ತಿವೆ. ಕೂಡಲೇ ಎಲ್ಲ ವಿಮಾನಯಾನ ಸಂಸ್ಥೆಗಳು ಏರ್‌ಬಸ್ ಎ–320 ಸರಣಿಯ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಹಾರಾಟ ನಡೆಸುವ ಮುನ್ನ ದೋಷಪೂರಿತ ಭಾಗಗಳನ್ನು ಬದಲಾಯಿಸಬೇಕು ಎಂದು ಇಎಎಸ್ಎ ಸಂಸ್ಥೆ ಸೂಚಿಸಿದೆ. ಇದರ ಬೆನ್ನಲೇ ಇಂಡಿಗೊ ವಿಮಾನ ಸೇವೆ ರದ್ದಾಗುತ್ತಿದೆ. ಏರ್‌ಬಸ್ ತಾಂತ್ರಿಕ ದೋಷ ವಿಮಾನಗಳು ರದ್ದಾಗುತ್ತಿರುವುದಕ್ಕೆ ಕಾರಣವಿರಬಹುದು ಎಂದು ವಿಮಾನಯಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
‘2ನೇ ಹಂತದ ವಿಮಾನದ ಸಿಬ್ಬಂದಿ ಕರ್ತವ್ಯ ಅವಧಿ ಮಿತಿ (ಎಫ್‌ಡಿಟಿಎಲ್) ನಿಯಮಗಳ ಜಾರಿಯಿಂದಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯು ಭಾರಿ ಪ್ರಮಾಣದ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದೇ ಕಾರಣದಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಇಂಡಿಗೊ ವಿಮಾನಗಳ ವ್ಯತ್ಯಯ ಮತ್ತು ರದ್ದಾಗುತ್ತಿವೆ’ ಎಂದು ಮೂಲಗಳು ತಿಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.