ADVERTISEMENT

ಭಗವದ್ಗೀತೆ ಸಾರ್ವಕಾಲಿಕ ಗ್ರಂಥ

ಗೀತೆ ಪಾರಾಯಣ, ತತ್ವಾಮೃತ ರಸಧಾರೆ ವಿಚಾರ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 14:17 IST
Last Updated 10 ಡಿಸೆಂಬರ್ 2019, 14:17 IST
ವಿಜಯಪುರದ ರಾಯಲ್‌ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮವನ್ನು ಅನಂತಕುಮಾರ ಶರ್ಮಾ ಅವರು ಉದ್ಘಾಟನೆ ಮಾಡಿದರು
ವಿಜಯಪುರದ ರಾಯಲ್‌ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮವನ್ನು ಅನಂತಕುಮಾರ ಶರ್ಮಾ ಅವರು ಉದ್ಘಾಟನೆ ಮಾಡಿದರು   

ವಿಜಯಪುರ: ಶ್ರೀಕೃಷ್ಣ ಪರಮಾತ್ಮ ಉಪದೇಶಿಸಿದ ಭಗವದ್ಗೀತೆ ಎಲ್ಲಾ ಕಾಲದಲ್ಲಿಯೂ ಎಲ್ಲ ಧರ್ಮ, ವ್ಯಕ್ತಿ, ಕುಟುಂಬ, ಸಾಮಾಜಿಕ ಜೀವನಕ್ಕೆ ಅನ್ವಯಿಸುವ ಗ್ರಂಥ ಎಂದು ಅನಂತಕುಮಾರಶರ್ಮಾ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶ್ರೀಕೃಷ್ಣ ಸತ್ಸಂಗ ಸೇವಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ, ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕಪುರಂದರ ಗೀತ ತತ್ವಾಮೃತ ರಸಧಾರೆಯ 174 ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 125 ನೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥದಲ್ಲಿರುವ ಎಲ್ಲ ಅಂಶಗಳು ಜೀವನ ಸಾರ್ಥಕತೆಗೆ ಪೂರಕವಾಗಿವೆ. ಅಲ್ಲದೇ, ಭಗವದ್ಗೀತೆ ಪಠಣದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನ, ನೈತಿಕ ಚಿಂತನೆಗಳು ಬೆಳೆಯುತ್ತವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಭಗವದ್ಗೀತೆ ಬೋಧಿಸಬೇಕು. ಧರ್ಮ-ಅಧರ್ಮಗಳ ಯುದ್ಧದ ಸಂದರ್ಭದಲ್ಲಿ ಎಲ್ಲವೂ ಭಗವಂತನಿಗೆ ಅರ್ಪಿಸಬೇಕು. ಈ ಸಂದರ್ಭದಲ್ಲಿ ನಡೆಯುವ ಎಲ್ಲಾ ಧರ್ಮ ಯುದ್ಧಗಳಲ್ಲಿನ ಪಾಪಗಳು ಭಗವಂತನಿಗೆ ಸಮರ್ಪಿತಗೊಳ್ಳತ್ತವೆ. ಧರ್ಮದ ಪರ ಹೋರಾಡುವವರಿಗೆ ಯಾವುದೇ ಪಾಪ ಮೆತ್ತಿಕೊಳ್ಳುವುದಿಲ್ಲ ಎಂದರು.

ADVERTISEMENT

ಸತ್ಸಂಗದ ಅದ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಮಾತನಾಡಿ, ‘ಭಗವದ್ಗೀತೆಯಲ್ಲಿ ಪ್ರಾಯೋಗಿಕ ಹಿತ ವಚನಗಳಿದ್ದು, ಅವುಗಳ ಪಠಣದಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು. ಈ ಮೂಲಕ ವ್ಯಕ್ತಿ ಜೀವನದಲ್ಲಿ ಹೊಸಬೆಳಕು ಕಂಗೊಳಿಸಿ ಜ್ಞಾನದ ಹಿರಿಮೆ ಹೆಚ್ಚಲಿದೆ. ವಿಶ್ವದಲ್ಲೇ ಭಾರತದ ಸಂಸ್ಕೃತಿ ಅತ್ಯುತ್ತಮವಾದದು. ಪ್ರಸ್ತುತ ಅಧ್ಯಾತ್ಮದಿಂದ ಭೌತಿಕ ಜೀವನದತ್ತ ಸಾಗುತ್ತಿದ್ದೇವೆ. ಇದು ಯಶಸ್ಸು ತರುವುದಿಲ್ಲ. ಈ ಸಂಸ್ಕೃತಿಯಲ್ಲಿಯೇ ಜೀವನ ಇದೆ. ಆದರೆ, ಸಂಸ್ಕೃತಿಯು ಅಧಃಪತನದತ್ತ ಸಾಗುತ್ತಿದೆ. ಇದನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. ಧರ್ಮ ಪಾಲನೆ ಮತ್ತು ಭಗವದ್ಗೀತೆ ಅನುಕರಣೆ ಮಾಡಬೇಕು. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ. ಈ ದಿಸೆಯಲ್ಲಿ ಸಂತರು ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.

ಶಿಕ್ಷಕ ನರಗುಂದ ಶಿವಾಜಿರಾವ್ ಮಾತನಾಡಿ, ‘ಸತ್ಸಂಗ ಕಾರ್ಯಕ್ರಮಗಳು ಜನರನ್ನು ಸನ್ಮಾರ್ಗದ ಕಡೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉತ್ತಮ ಸಂಗ ಮಾಡಿದಾಗ ಮಾನವನ ಬದುಕಿನ ಮಜಲುಗಳು ಬದಲಾಗುತ್ತವೆ. ಸತ್ಸಂಗ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ವಿನಯ, ಶ್ರದ್ಧೆ, ಭಕ್ತಿ, ಗುರುಹಿರಿಯರ ಮೇಲೆ ಗೌರವ ಭಾವನೆ ಹೆಚ್ಚಾಗಲು ನಾಂದಿಯಾಗುತ್ತದೆ’ ಎಂದರು.

‘ಪುರಾಣಗಳ ಕಾಲದಲ್ಲಿ ಗರ್ಭಿಣಿಯರು ಕೇಳುತ್ತಿದ್ದ ಉತ್ತಮ ಕಥೆಗಳು, ಭಜನೆಗಳು, ಸಾಹಿತ್ಯದಿಂದಾಗಿ ಮಕ್ಕಳಿಗೆ ಗರ್ಭದಿಂದಲೇ ಉತ್ತಮ ಸಂಸ್ಕಾರ ರೂಢಿಯಾಗುತ್ತಿತ್ತು. ಇಂತಹ ಉತ್ತಮ ಪ್ರಯತ್ನಗಳು ಆಗಬೇಕು’ ಎಂದರು.

ವಾಗ್ದೇವಿ ವಿಪ್ರ ಮಹಿಳಾ ಸಂಘದ ವತಿಯಿಂದ ಲಲಿತ ಸಹಸ್ರನಾಮ ಪಠಣ ನಡೆಯಿತು. ಜೂನಿಯರ್ ಘಂಟಸಾಲ ಡಿ.ಎನ್.ಲಕ್ಷ್ಮೀಪತಿ, ಗಾಯಕರಾದ ಟಿ.ಮಹಾತ್ಮಾಂಜನೇಯ, ನರಸಿಂಹಪ್ಪ ಅವರಿಂದ ಗೀತಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಬಡವರಿಗೆ ಕಂಬಳಿ ವಿತರಣೆ, ಮಕ್ಕಳು ಕಲಿಕೋಪರಣಗಳ ವಿತರಣೆ, ಭಾಗವಹಿಸಿದ್ದ ಭಕ್ತರಿ ತಿಲಕಧಾರಣೆ ಮಾಡಲಾಯಿತು.

ಭಗವದ್ಗೀತಾ ಪ್ರವಚಕ ಕೇಶವಭಟ್ಟಾಚಾರ್ಯ, ಸತ್ಸಂಗದ ಉಪಾಧ್ಯಕ್ಷ ಪಿ.ನಾರಾಯಣಪ್ಪ, ವಿ.ಎನ್.ವೆಂಕಟೇಶ್, ಡಿ.ನಾಗರಾಜ, ವಿ.ಎನ್.ರಮೇಶ್, ಮುನಿರಾಜು, ವಿ.ಕೃಷ್ಣಪ್ಪ, ವಿ.ನಾಗಯ್ಯ, ಎಸ್.ಆರ್.ಲಕ್ಷ್ಮೀನಾರಾಯಣ, ಆರ್.ರಾಜಶೇಖರ್, ರಘು, ಎಂ ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.