ADVERTISEMENT

ಜೀವವೈವಿಧ್ಯದ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:00 IST
Last Updated 22 ಜುಲೈ 2021, 4:00 IST
ಮಾಕಳಿ ಬೆಟ್ಟದಲ್ಲಿ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಸರಪ್ರಿಯರು
ಮಾಕಳಿ ಬೆಟ್ಟದಲ್ಲಿ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಸರಪ್ರಿಯರು   

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಯುವ ಸಂಚಲನದಿಂದ ಮಾಕಳಿ ಬೆಟ್ಟದಲ್ಲಿ ಜೀವವೈವಿಧ್ಯ ಕುರಿತು ವಿಚಾರ ಸಂಕಿರಣ ನಡೆಯಿತು.

ಉಪನ್ಯಾಸಕ ಕೆ. ವೆಂಕಟೇಶ್‌ ಮಾತನಾಡಿ, ಹುಲಿ ಸಾಮ್ರಾಜ್ಯ ಕುರಿತು ಬರೆದ ಬಸಪ್ಪನವರ್‌, ಒಂದು ಹುಲ್ಲಿನ ಕ್ರಾಂತಿ ಬರೆದ ಮಸನೊಬೊ ಪುಕೊವೊಕೊ, ತೇಜಸ್ವಿ ಜೀವನ ಮತ್ತು ಪರಿಸರ ಕಾಳಜಿ ಕೃತಿಗಳು ಹಾಗೂ ಈಗಲೂ ಕಾಡಿನಲ್ಲಿ ಸಂಚರಿಸುತ್ತಲೇ ವನ್ಯಜೀವಿಗಳ ಕುರಿತು ಅಪೂರ್ವ ಒಳನೋಟ ನೀಡುತ್ತಿರುವ ಕೃಪಾಕರ ಸೇನಾನಿ ಎಲ್ಲರೂ ನಮಗೆ ಸದಾ ನೆನಪಾಗಬೇಕು ಎಂದರು.

ಈಗ ಎಲ್ಲರೂ ಸಿದ್ಧಾರ್ಥರಾಗಿದ್ದಾರೆ. ತಂದೆ, ತಾಯಿ ಬಯಸಿದಂತೆ ಆಗುವ ಚಲ ಇರುವವರಾಗಿದ್ದಾರೆ. ಎಂತಹ ವಾಮಮಾರ್ಗದಲ್ಲೇ ಅಗಲಿ ಸಂಪಾದನೆ ಮಾಡಬೇಕು. ಇದರಿಂದ ಎಲ್ಲವೂ ಸಿಗುತ್ತದೆ ಎಂದುಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಇದನ್ನೇ ಪೋಷಿಸುತ್ತಿವೆ. ನೈಜ ಕಲಿಕೆಗಿಂತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಕಸರತ್ತು ಮಾಡಿಸುವುದೇ ಉದ್ಯೋಗ ಎಂದುಕೊಂಡಿದ್ದೇವೆ ಎಂದು ವಿಷಾದಿಸಿದರು.

ADVERTISEMENT

ಜೀವವೈವಿಧ್ಯದ ತಿಳಿವು ನಮ್ಮ ಜಗತ್ತನ್ನು ವಿಸ್ತಾರಗೊಳಿಸುತ್ತದೆ. ಇದು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು. ನಾನಲ್ಲ ಮುಖ್ಯ, ನಾವು ಮುಖ್ಯ. ಸಮಾಜ ಸೇವೆಯಿಂದ ಜೀವನ ಸಾರ್ಥಕತೆ ಎಂಬ ಬುದ್ಧ ತತ್ವ ನಮ್ಮ ಜೀವನವಾಗಬೇಕಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್‌ ಮಾತನಾಡಿ, ದೊಡ್ಡಬಳ್ಳಾಪುರ ವಿಶಿಷ್ಟ ಅರಣ್ಯ ವಲಯ ಹೊಂದಿದೆ. ಹೆಚ್ಚು ಬೆಟ್ಟ ಗುಡ್ಡಗಳನ್ನು ಹೊಂದಿದೆ. ಇಲ್ಲಿ ಇರುವ ಸಮೃದ್ಧ ಪರಿಸರದಲ್ಲಿ ವಿಶಿಷ್ಟ ಜಾತಿಯ ಗಿಡ, ಮರಗಳು ಇವೆ. ಇವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಅರಣ್ಯ ಇಲಾಖೆಗೆ ಮಾತ್ರ ಸೀಮಿತವಾಗಿರದೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದು ಹೇಳಿದರು.

ಯುವ ಸಂಚಲನದಂತಹ ಯುವ ಸಮೂಹ ಅರಣ್ಯ ಇಲಾಖೆಗೆ ಬೆಂಬಲವಾಗಿ ನಿಲ್ಲಬೇಕಿದೆ. ಜೀವವೈವಿಧ್ಯ, ಇಲ್ಲಿನ ಸಂಸ್ಕೃತಿ ಕುರಿತು ವ್ಯಾಪಕ ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಮಾತನಾಡಿ, ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನಲ್ಲಿ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಪತ್ತೆಯಾಗಿರುವ ಅಪರೂಪದ ಕೀಟಭಕ್ಷಕ ಸಸಿಗಳ ವೀಕ್ಷಣೆ, ಏಕಾಶಿಪುರ ಗ್ರಾಮದ ಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಸಮೀಪ ನಿರ್ಮಾಣ ಮಾಡಲಾಗಿರುವ ಅಶೋಕ ವನ ವೀಕ್ಷಣೆ ಹಾಗೂ ಹಣಬೆ ಕೆರೆಯಲ್ಲಿ ವಿವಿಧ ಜಾತಿಯ ಪಕ್ಷಿಗಳ ವೀಕ್ಷಣೆ ಮಾಡುವು ಮೂಲಕ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸರಿತಾ, ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಗೀತಾಚವನ್‌, ಉಪ ವಲಯ ಅರಣ್ಯಾಧಿಕಾರಿ ಚಂದ್ರಕುಮಾರ್, ಅರಣ್ಯ ರಕ್ಷಕ ಸೋಮನಾಯ್ಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.