ADVERTISEMENT

‘ಜನತಂತ್ರದ ಮೌಲ್ಯ ಕಾಪಾಡಿ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:02 IST
Last Updated 23 ಅಕ್ಟೋಬರ್ 2020, 2:02 IST
ಬಂಗಾರಪೇಟೆಯಲ್ಲಿ ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ. ಗೌಡ ಪರ ನಡೆದ ಮತಯಾಚನೆ ಸಭೆಯನ್ನು ಸಂಸದ ಎಸ್. ಮುನಿಸ್ವಾಮಿ ಉದ್ಘಾಟಿಸಿದರು
ಬಂಗಾರಪೇಟೆಯಲ್ಲಿ ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ. ಗೌಡ ಪರ ನಡೆದ ಮತಯಾಚನೆ ಸಭೆಯನ್ನು ಸಂಸದ ಎಸ್. ಮುನಿಸ್ವಾಮಿ ಉದ್ಘಾಟಿಸಿದರು   

ಬಂಗಾರಪೇಟೆ: ‘ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯಬೇಕಿದೆ’ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಪಟ್ಟಣದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ. ಗೌಡ ಪರ ನಡೆದ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಪಾಕಿಸ್ತಾನದ ಭಯೋತ್ಪಾದನೆ, ಕೊರೊನಾ ಸಂಕಷ್ಟ, ರೈತರ ಸಮಸ್ಯೆ, ನೆರೆ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಲಾಗುತ್ತಿದೆ ಎಂದರು.

ADVERTISEMENT

ಅಭ್ಯರ್ಥಿ ಚಿದಾನಂದ್‌ ಎಂ. ಗೌಡ ಅವರಿಗೆ ಹಲವು ವರ್ಷದಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ತುಮಕೂರು ಮತ್ತು ಬೆಂಗಳೂರಿನಲ್ಲಿರುವ ಪ್ರೆಸಿಡೆನ್ಸಿ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಚಿದಾನಂದ ಎಜುಕೇಷನ್ ಸೊಸೈಟಿ ಸಂಸ್ಥಾಪಕರಾಗಿದ್ದಾರೆ. 6 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದಾರೆ. ಸಾವಿರಾರು ಪದವೀಧರರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದು ಹೇಳಿದರು.

ನಾಲ್ಕು ದಶಕದಿಂದ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಕಳೆದ ಬಾರಿ ಹಾಲಿ ಸದಸ್ಯರು ಎರಡು ಬಾರಿ ಸೋತ ಕಾರಣ ಅನುಕಂಪದ ಅಲೆಯಲ್ಲಿ ಜಯ ಸಾಧಿಸಿದ್ದರು. ಆದರೆ, ಪದವೀಧರರ ಕ್ಷೇತ್ರಕ್ಕೆ ಅವರು ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 8 ಬಾರಿ ಬಿಜೆಪಿ ಅಭ್ಯರ್ಥಿಯನ್ನು ಕ್ಷೇತ್ರದ ಪದವೀಧರ ಮತದಾರರು ಗೆಲ್ಲಿಸಿದ್ದಾರೆ. ಬಂಗಾರಪೇಟೆಯಲ್ಲಿ 1,900ಕ್ಕೂ ಹೆಚ್ಚು ಪದವೀಧರ ಮತದಾರರಿದ್ದಾರೆ. ಎಲ್ಲಾ ಮತಗಳನ್ನು ಪಕ್ಷದ ಅಭ್ಯರ್ಥಿಗೆ ಹಾಕಿಸಲು ಸರ್ವಪ್ರಯತ್ನ ಮಾಡಲಾಗುವುದು ಎಂದರು.

ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ವಿ. ಮಹೇಶ್, ಶ್ರೀನಿವಾಸಗೌಡ, ಮುಖಂಡರಾದ ಪುಷ್ಪಮ್ಮ, ಹೊಸರಾಯಪ್ಪ, ಶಶಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.