ADVERTISEMENT

‘ಅಂಬೇಡ್ಕರ್ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ’

ಶಿಕ್ಷಣ ಇಲಾಖೆಯ ಸುತ್ತೋಲೆಗೆ ಖಂಡನೆ, ಸಚಿವರ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:03 IST
Last Updated 14 ನವೆಂಬರ್ 2019, 13:03 IST
ಛಲವಾದಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು 
ಛಲವಾದಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು    

ದೇವನಹಳ್ಳಿ: ‘ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದ್ದು, ಕೂಡಲೇ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಮುಖಂಡ ಮುನಿನರಸಿಂಹಯ್ಯ ಒತ್ತಾಯಿಸಿದರು.

ಶಿಕ್ಷಣ ಇಲಾಖೆ ಸುತ್ತೋಲೆ ವಿರುದ್ಧ ಛಲವಾದಿ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶೋಷಿತ ಸಮುದಾಯದ ಅದರ್ಶ ನಾಯಕ, ಸ್ವಾಭಿಮಾನದ ಮಾರ್ಗದರ್ಶಕ ಅಂಬೇಡ್ಕರ್ ಬಗ್ಗೆ ಹಗುರ ರೀತಿಯಲ್ಲಿ ಸುತ್ತೋಲೆ ಪ್ರಸ್ತಾಪಿಸಿರುವುದು ಬಿಜೆಪಿ ದೇಶದ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. 1947 ಆಗಸ್ಟ್‌ 19ರಂದು ಸಂವಿಧಾನ ರಚಿಸಲು ಏಳು ಜನ ಸದಸ್ಯರನ್ನು ನೇಮಕ ಮಾಡಿ ಅಂಬೇಡ್ಕರ್‌ರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈ ಪೈಕಿ ಒಬ್ಬರು ರಾಜೀನಾಮೆ ನೀಡಿದ್ದರು. ಮತ್ತೊಬ್ಬರು ಅಕಾಲ ಮರಣ, ಇನ್ನೊಬ್ಬರು ಸ್ವಂತ ಕೆಲಸಕ್ಕೆ ಅಮೆರಿಕದಲ್ಲಿ ಉಳಿದರು. ಒಬ್ಬರು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಉಳಿದಿಬ್ಬರು ಅನಾರೋಗ್ಯದ ಕಾರಣ ಸಂವಿಧಾನ ರಚನೆಯಿಂದ ಹೊರಗುಳಿದರು. ಜವಾಬ್ದಾರಿ ಹೊತ್ತಿದ್ದು ಅಂಬೇಡ್ಕರ್ ಎಂಬುದನ್ನು ಶಿಕ್ಷಣ ಸಚಿವರು, ಸಂಬಂಧಿಸಿದ ಅಧಿಕಾರಿಗಳು ಆರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಕೆಪಿಸಿಸಿ ಜಿಲ್ಲಾ ಎಸ್‌ಸಿ ಘಟಕ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ, ‘ಸಂವಿಧಾನದಡಿಯಲ್ಲಿ ಸರ್ಕಾರ ರಚನೆಯಾಗುತ್ತದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಸಂವಿಧಾನದಡಿಯಲ್ಲಿ ಕೆಲಸ ಮಾಡಬೇಕು. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎಂಬುದಕ್ಕೆ ಸರ್ಕಾರ ಸಾಕ್ಷ್ಯ ನೀಡಲಿ. ಕೋಮುವಾದಿ, ಜಾತಿ ವಾದಿ, ಮನುವಾದಿಗಳು ಸಂದರ್ಭಕ್ಕೆ ಅನುಗುಣವಾಗಿ ಅಂಬೇಡ್ಕರ್ ಬಗ್ಗೆ ಕೀಳಾಗಿ, ಅವಮಾನಕರ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಸೇರಿದಂತೆ ಇತಿಹಾಸಕಾರರ ಬಗ್ಗೆ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ. ಶಾಲಾ ಮಕ್ಕಳಿಗೆ, ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ಸುತ್ತೋಲೆಗೆ ಕಾರಣರಾದವರ ವಿರುದ್ಧಸರ್ಕಾರ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಅವರನ್ನು ಕೂಡಲೇ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

ಛಲವಾದಿ ಮಹಾ ಸಭಾ ಜಿಲ್ಲಾ ಅಧ್ಯಕ್ಷ ರೆಡ್ಡಿಹಳ್ಳಿ ಮುನಿರಾಜು, ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕೆಪಿಸಿಸಿ ರಾಜ್ಯ ಎಸ್‌ಸಿ ಘಟಕ ಕಾರ್ಯದರ್ಶಿ ಪ್ರಕಾಶ್, ಪುರಸಭೆ ಸದಸ್ಯ ಜಿ.ಸುರೇಶ್, ಮುಖಂಡರಾದ ಎಚ್.ಕೆ.ವೆಂಕಟೇಶಪ್ಪ ತಿಮ್ಮರಾಯಪ್ಪ, ಕೆಂಪಣ್ಣ, ಡಿ.ಎಂ. ನಾಗರಾಜ್, ಕೃಷ್ಣಮೂರ್ತಿ, ಬಿಜ್ಜವಾರ ಸುಬ್ರಮಣಿ, ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.