ADVERTISEMENT

‘ಜನರನ್ನು ಬಿಜೆಪಿ ದಿಕ್ಕು ತಪ್ಪಿಸುತ್ತಿದೆ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 14:35 IST
Last Updated 10 ಏಪ್ರಿಲ್ 2019, 14:35 IST
ವಿಜಯಪುರ ಬಳಿಯ ಮಂಡಿಬೆಲೆ ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ಜಂಟಿಯಾಗಿ ಮತಯಾಚನೆ ಮಾಡಿದರು
ವಿಜಯಪುರ ಬಳಿಯ ಮಂಡಿಬೆಲೆ ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ಜಂಟಿಯಾಗಿ ಮತಯಾಚನೆ ಮಾಡಿದರು   

ವಿಜಯಪುರ: ‘ದೇಶವೆಂದರೆ ನೆಲ, ಜಲ, ಭಾಷೆ, ಗಡಿಗಳಷ್ಟೇ ಅಲ್ಲ, ದೇಶವೆಂದರೆ ಮನುಷ್ಯರು ಎನ್ನುವುದನ್ನು ಮರೆತಿರುವ ಬಿಜೆಪಿ ದೇಶ ರಕ್ಷಣೆ ಮಾಡುತ್ತೇವೆ ಎಂದು ಮತ ಕೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ. ಚೇತನ್‌ ಗೌಡ ‌ಆರೋಪಿಸಿದರು

ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರೊಂದಿಗೆ ಜಂಟಿಯಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ ಮೊದಲು ನಂತರ ಪಕ್ಷ ಎನ್ನುವ ಬಿಜೆಪಿ ದೇಶದಲ್ಲಿ ಆಗುತ್ತಿರುವ ದೌರ್ಜನ್ಯಗಳು, ದಬ್ಬಾಳಿಕೆಗಳು, ಭ್ರಷ್ಟಾಚಾರವನ್ನು ತಡೆಗಟ್ಟಲಿಕ್ಕೆ ವಿಫಲವಾಗಿದೆ. ದೇಶದಲ್ಲಿನ ಜನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ADVERTISEMENT

ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಕೋರಮಂಗಲ ವೀರಪ್ಪ ಮಾತನಾಡಿ, ‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತಿವೆ. ಲೋಕಸಭಾ ಚುನಾವಣೆಗೂ ಮೈತ್ರಿ ಮುಂದುವರೆದಿರುವುದರಿಂದ ನಾವೆಲ್ಲರೂ ಮೈತ್ರಿ ಧರ್ಮ ಪಾಲನೆ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಡಿಬೆಲೆ ದೇವರಾಜಪ್ಪ ಮಾತನಾಡಿ, ‘60 ವರ್ಷಗಳಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ. ಮಾಡಿದ್ದೆಲ್ಲ 5 ವರ್ಷಗಳಲ್ಲಿ ನಾವೇ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸ ತಿಳಿದುಕೊಳ್ಳಬೇಕಾಗಿದೆ’ ಎಂದರು.

ಕೆಪಿಸಿಸಿ ಸದಸ್ಯ ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರಾ ವೀರೇಗೌಡ, ಮುಖಂಡರಾದ ಮಂಡಿಬೆಲೆ ರಾಜಣ್ಣ, ಕಲ್ಯಾಣ್ ಕುಮಾರ್‌ ಬಾಬು, ವೀರೇಗೌಡ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್, ಬುಳ್ಳಹಳ್ಳಿ ರಾಜಪ್ಪ, ವಿರೂಪಾಕ್ಷಪ್ಪ, ಮುನಿರಾಜು, ಸುಭ್ರಮಣಿ, ರಘುಪತಿ, ಧರ್ಮಪುರ ಕೃಷ್ಣಪ್ಪ, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.